ಲಖನೌ: ಸುಮಾರು 3,700 ಕೋಟಿ ರೂ. ಮೌಲ್ಯದ ಸೈಬರ್ ವಂಚನೆಯ ಮತ್ತು ಪ್ರಸ್ತುತ ಜೈಲಿನಲ್ಲಿರುವ ಆರೋಪಿಯೊಬ್ಬ ಪೊಲೀಸ್ ಕಾನ್‌ಸ್ಟೆಬಲ್ ಫೋನ್ ಬಳಸಿ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರಿಗೆ ಬೆದರಿಕೆ ಇಮೇಲ್ ಕಳುಹಿಸಿದ ಆರೋಪದ ಮೇಲೆ ಭಾನುವಾರ(ನ. 09) ಎಫ್‌ಐಆರ್(FIR) ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಈ ಕುರಿತು ಮಾತನಾಡಿರುವ ಅಧಿಕಾರಿಯೊಬ್ಬರು, ನಕಲಿ ಆನ್‌ಲೈನ್ ವ್ಯಾಪಾರ ಯೋಜನೆಯ ಮೂಲಕ ಸುಮಾರು ಏಳು ಲಕ್ಷ ಹೂಡಿಕೆದಾರರಿಗೆ 3,700 ಕೋಟಿ ರೂ.ಗಳಷ್ಟು ವಂಚನೆ ಮಾಡಿದ ಆರೋಪಿ ಅನುಭವ್ ಮಿತ್ತಲ್, ಲಖನೌ ಜೈಲಿನಲ್ಲಿದ್ದಾನೆ. ಮತ್ತೊಬ್ಬ ಕೈದಿಯನ್ನ ಸಿಲುಕಿಸಲು ನಕಲಿ ಹೆಸರಿನಲ್ಲಿ ಇಮೇಲ್ ಕಳುಹಿಸಿದ್ದಾನೆ ಎಂದು ತಿಳಿಸಿದ್ದಾರೆ.
ನ್ಯಾಯಾಧೀಶರನ್ನು ಕೊಲೆ ಮಾಡಲಾಗುವುದು ಎಂದು ಇಮೇಲ್ ಸಂದೇಶ ಕಳುಹಿಸಿದ್ದಾನೆ. ಸೈಬರ್ ಸೆಲ್ ಮತ್ತು ಅಪರಾಧ ಶಾಖೆಯ ವಿಚಾರಣೆಯಲ್ಲಿ ಇಮೇಲ್ ಕಾನ್‌ಸ್ಟೆಬಲ್ ಅಜಯ್ ಕುಮಾರ್ ಅವರ ಫೋನ್‌ನಿಂದ ಬಂದಿದೆ ಎಂದು ತಿಳಿದು ಬಂದಿದೆ. ಅನುಭವ್ ಮಿತ್ತಲ್ ಮತ್ತು ಪೊಲೀಸ್ ಲೈನ್ಸ್‌ನಲ್ಲಿ ನಿಯೋಜನೆಗೊಂಡಿರುವ ಪೊಲೀಸ್ ಪೇದೆ ಅಜಯ್ ಕುಮಾರ್ ವಿರುದ್ಧ ಕ್ರಿಮಿನಲ್ ಬೆದರಿಕೆ ಮತ್ತು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಎಂದು ಹೇಳಿದ್ದಾರೆ.
ಇನ್ನು ಈ ಕುರಿತು ಮಾತನಾಡಿರುವ ಪೊಲೀಸ್ ಪೇದೆ ಅಜಯ್ ಕುಮಾರ್, ನ. 04ರಂದು ಮಿತ್ತಲ್ ತನ್ನ ಪ್ರಕರಣದ ಸ್ಥಿತಿಯನ್ನು ಪರಿಶೀಲಿಸಲು ತನ್ನ ಫೋನ್ ಅನ್ನು ಎರವಲು ಪಡೆದಿದ್ದ ಮತ್ತು ರಹಸ್ಯವಾಗಿ ಹೊಸ ಇಮೇಲ್ ಐಡಿಯನ್ನು ರಚಿಸಿದ್ದ, ಮರುದಿನ ಬೆಳಿಗ್ಗೆ ಬೆದರಿಕೆ ಸಂದೇಶವನ್ನು ಸ್ವಯಂಚಾಲಿತವಾಗಿ ಕಳುಹಿಸಲು ಟೈಮರ್ ಅನ್ನು ಹೊಂದಿಸಿದ್ದ. ಡಿಸೆಂಬರ್ 2023ರಿಂದ ಜೈಲಿನಲ್ಲಿರುವ ಸಹ ಕೈದಿ ಆನಂದೇಶ್ವರ ಅಗ್ರಹರಿಯನ್ನು ವೈಯಕ್ತಿಕ ದ್ವೇಷದ ಆಧಾರದ ಮೇಲೆ ಕೊಲೆ ಪ್ರಕರಣದಲ್ಲಿ ಸಿಲುಕಿಸಲು ಮಿತ್ತಲ್ ಈ ಕೃತ್ಯವನ್ನು ರೂಪಿಸಿದ್ದಾರೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)