ಸಾಂದರ್ಭಿಕ ಚಿತ್ರ 
ನ್ಯೂಸ್

ನೀವು ಈ ಆರೋಪಿಯನ್ನು ಹಿಡಿದುಕೊಟ್ಟರೆ ಪೊಲೀಸರು ಕೊಡುವ ಬಹುಮಾನ ಕೇಳಿದರೆ ಶಾಕ್​ ಆಗ್ತೀರಾ

ಜೈಪುರ: ನಾವು ಕಂಡಂತೆ ಪೊಲೀಸರು ನಟೋರಿಯಸ್​ ಕ್ರಿಮಿನಲ್​ಗಳನ್ನು ಹಿಡಿಯಲು ಕೆಲವೊಮ್ಮೆ ಸಾರ್ವಜನಿಕರ ಸಹಾಯವನ್ನು ಪಡೆಯುತ್ತಾರೆ ಮತ್ತು ಅದಕ್ಕಾಗಿ ಲಕ್ಷಾಂತರ ರೂಪಾಯಿ ಬಹುಮಾನವನ್ನು ಸಹ ಘೋಷಿಸುತ್ತಾರೆ. ರಾಜಸ್ಥಾನದಲ್ಲಿ ಇದೀಗ ಇದೇ ರೀತಿಯ ಘಟನೆಯೊಂದು ನಡೆದಿದ್ದು, ಪೊಲೀಸರು ಘೋಷಿಸಿರುವ ಬಹುಮಾನದ ಮೊತ್ತ ಎಲ್ಲರ ಹುಬ್ಬೇರುವಂತೆ ಮಾಡಿದೆ.

ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣದಲ್ಲಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿರುವ ಆರೋಪಿ ಯೋಗೇಶ್​ ಮೇಘವಾಲ್​ ಎಂಬಾತನನ್ನು ಹುಡುಕಿ ಕೊಟ್ಟವರಿಗೆ ಜುಂಜುನು ಜಿಲ್ಲೆಯ ಸಿಂಘನಾ ಪೊಲೀಸರು 50 ಪೈಸೆ ಬಹುಮಾನವನ್ನು ಘೋಷಿಸಿದ್ದಾರೆ. ಈ ಸುದ್ದಿ ಎಲ್ಲೆಡೆ ವೈರಲ್​ ಆಗಿದ್ದು, ಪೊಲೀಸರು ಘೋಷಿಸಿರುವ ಬಹುಮಾನದ ಮೊತ್ತ ಕೇಳಿ ಸಾರ್ವಜನಿಕರು ದಂಗಾಗಿದ್ಧಾರೆ.

ಈ ಕುರಿತು ಮಾತನಾಡಿರುವ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ದೇವೇಂದ್ರ ವಿಷ್ಣೋಯ್, ಸಮಾಜದಲ್ಲಿ ಆರೋಪಿಯ ಸ್ಥಾನಮಾನವು ಚಾಲ್ತಿಯಲ್ಲಿ ಇಲ್ಲದ 50 ಪೈಸೆಗೆ ಸಮ, ಹೀಗಾಗಿ ಅವರನ್ನು ಕಾನೂನಿಗೆ ಒಪ್ಪಿಸಿ ಎನ್ನುವ ಧನಾತ್ಮಕ ಸಂದೇಶವನ್ನು ಸಾರ್ವಜನಿಕರಿಗೆ ನೀಡುತ್ತಿದ್ದೇವೆ. ಹೀಗಾಗಿ ಆತನನ್ನು ಹುಡುಕಿ ಕೊಟ್ಟವರಿಗೆ 50 ಪೈಸೆ ಬಹುಮಾನವನ್ನು ನೀಡಿ ಸತ್ಕರಿಸಲಾಗುವುದು.

ಇತ್ತ ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ವ್ಯಾಪಕವಾಗಿ ಚರ್ಚೆ ಮಾಡಲಾಗುತ್ತಿದೆ. ಆರೋಪಿಯನ್ನು ಪತ್ತೆ ಹಚ್ಚಲು ಪೊಲೀಸರು ಕ್ರಮಕೈಗೊಂಡಿರುವ ರೀತಿ ಸರಿಯಿದೆ ಎಂದು ಕೆಲವುರ ಹೇಳಿದರೆ ಹಲವುರ ಪೊಲೀಸರ ನಡೆಯನ್ನು ಖಂಡಿಸಿದ್ದಾರೆ.