ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯ ಪುರಸಭೆ ಉಪಚುನಾವಣೆಯಲ್ಲಿ ಆಡಳಿತ ಪಕ್ಷವಾದ ಆಮ್ ಆದ್ಮಿ ಪಕ್ಷ ಜಯಭೇರಿ ಬಾರಿಸಿದೆ. ಐದರಲ್ಲಿ ನಾಲ್ಕು ಸ್ಥಾನವನ್ನು ಪಕ್ಷ ತನ್ನದಾಗಿಸಿಕೊಂಡಿದೆ. ಕಾಂಗ್ರೆಸ್ ಒಂದು ಸ್ಥಾನದಲ್ಲಿ ಗೆದ್ದು ನಿಟ್ಟುಸಿರು ಬಿಟ್ಟಿದೆ.
ನವದೆಹಲಿ ಪುರಸಭೆಯ ಐದು ವಾರ್ಡ್ಗಳಿಗೆ ಫೆಬ್ರವರಿ 28ರಂದು ಉಪಚುನಾವಣೆ ನಡೆದಿತ್ತು. ಶೇ. 50 ಮತದಾರರು ಮತ ಚಲಾಯಿಸಿದ್ದರು. ಆ ಮತಗಳ ಎಣಿಕೆ ಇಂದು ನಡೆದಿದ್ದು ಅದರಲ್ಲಿ ಶಾಲಿಮಾರ್ ಬಾಗ್ ನಾರ್ತ್, ಕಲ್ಯಾಣ್‌ಪುರಿ, ತ್ರಿಲೋಕ್‌ಪುರಿ ಮತ್ತು ರೋಹಿಣಿ- ಸಿ ವಾರ್ಡ್‌ಗಳಲ್ಲಿ ಎಎಪಿ ಗೆಲುವಿನ ನಗೆ ಬೀರಿದೆ. ಶಾಲಿಮಾರ್ ಬಾಗ್ ನಾರ್ತ್ನಲ್ಲಿ ಈ ಹಿಂದೆ ಬಿಜೆಪಿಯ ಕೌನ್ಸಿಲರ್ ಇದ್ದು, ಇದೀಗ ಆ ಸ್ಥಾನವನ್ನು ಪಕ್ಷ ಎಎಪಿಗೆ ಬಿಟ್ಟುಕೊಟ್ಟಿದೆ. ಚೌಹಾಣ್ ಬಂಗಾರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದು ಬೀಗಿದ್ದಾರೆ.
ದೆಹಲಿಯ ಜನರು ನಮ್ಮ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅವರು ಬಿಜೆಪಿಯಿಂದ ಬೇಸರಗೊಂಡಿದ್ದಾರೆ ಮತ್ತು ಈ ಚುನಾವಣೆಯು ಅದರ ಸೂಚನೆಯಾಗಿದೆ . 2022 ರ ದೆಹಲಿ ಪುರಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಅಳಿಸಿಹಾಕಲಾಗುವುದು ಎಂದು ಎಎಪಿ ಮುಖಂಡ ಮತ್ತು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸಂತಸ ಹಂಚಿಕೊಂಡಿದ್ದಾರೆ. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ