ನ್ಯೂಸ್

Delhi ನಗರದಲ್ಲಿನ ವಾಯುಮಾಲಿನ್ಯಕ್ಕೆ ಆಪ್​ ಟೀಕೆ...; ಪಕ್ಕದ ರಾಜ್ಯದತ್ತ ಬೊಟ್ಟು ಮಾಡಿದ ಬಿಜೆಪಿ

Delhi: ಮುಖ್ಯಮಂತ್ರಿ ರೇಖಾ ಗುಪ್ತಾ ನೇತೃತ್ವದ ಬಿಜೆಪಿ ಸರ್ಕಾರ, ದೆಹಲಿ ನಗರದಲ್ಲಿನ ಮಾಲಿನ್ಯವನ್ನು ತಡೆಯುವಲ್ಲಿ ವಿಫಲವಾಗಿದೆ ಎಂದು ಆಮ್ ಆದ್ಮಿ ಪಕ್ಷ ಟೀಕಿಸಿದೆ.

ಈ ವಿಷಯವಾಗಿ ಮಾತನಾಡಿರುವ ಎಎಪಿ ಶಾಸಕ ಗೋಪಾಲ್ ರೈ, ದೆಹಲಿ ಸರ್ಕಾರ ಮಾಲಿನ್ಯ ತಡೆಗಟ್ಟಲು ಯಾವುದೇ ಕ್ರಮ ಕೈಗೊಳ್ಳದೆ ನೆಪವನ್ನು ಹೇಳುತ್ತಿದೆ, ದೆಹಲಿಯಲ್ಲಿ ಸಾಕಷ್ಟು ಮಾಲಿನ್ಯವಿದೆ. ಮಾಲಿನ್ಯದ ಮಟ್ಟ ಹೆಚ್ಚಾಗಿದೆ. ಆದರೆ ದೆಹಲಿ ಸರ್ಕಾರ ಪರಿಹಾರ ಮಾರ್ಗ ಹುಡುಕದೆ ನೆಪ ಹೇಳುತ್ತಿದೆ, ಇತರ ರಾಜ್ಯಗಳನ್ನು ದೂಷಿಸುತ್ತಿದೆ. ಹರಿಯಾಣ ಮತ್ತು ರಾಜಸ್ಥಾನದಲ್ಲಿ ಎಲ್ಲೆಡೆ ಬಿಜೆಪಿ ಅಧಿಕಾರದಲ್ಲಿದೆ. ರಾಜಧಾನಿಯಲ್ಲಿ ವಾಯು ತುರ್ತು ಪರಿಸ್ಥಿತಿ ಇದ್ದರೂ ಕೂಡ ಬಿಜೆಪಿ ನಾಯಕರು ಜನರನ್ನು ಪಟಾಕಿ ಸಿಡಿಸುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.

ಹೆಚ್ಚುತ್ತಿರುವ ಮಾಲಿನ್ಯದ ಬಗ್ಗೆ ರೇಖಾ ಗುಪ್ತಾ ಅವರನ್ನು ಅಪಹಾಸ್ಯ ಮಾಡಿದ ಎಎಪಿ ರಾಜ್ಯ ಮುಖ್ಯಸ್ಥ ಸೌರಭ್ ಭಾರದ್ವಾಜ್, ಸರ್ಕಾರ ಏನು ಮಾಡಿದೆ ಎಂದು ನಮಗೆ ತಿಳಿಯುತ್ತಿಲ್ಲ. ಅವರಿಗೆ ಎಕ್ಯೂಐ ಎಂದು ಹೇಳಲು ಸಹ ಸಾಧ್ಯವಿಲ್ಲ. ಅದನ್ನು ಐಕ್ಯೂ, ಕ್ಯೂಕ್ಯೂ ಎಂದು ಕರೆಯುತ್ತಾರೆ ಅವರಿಗೆ ಯಾವುದೇ ತಿಳುವಳಿಕೆ ಇಲ್ಲ. ಮಾಲಿನ್ಯವನ್ನು ತಡೆಯುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಹೇಳಿದರು.

ಸರ್ಕಾರ ದೀಪಾವಳಿಯ ಬಳಿಕ ಕೃತಕ ಮಳೆ ಸುರಿಸಿ, ಈ ಮೂಲಕ ಎಲ್ಲಾ ಮಾಲಿನ್ಯವನ್ನು ಸರಿಪಡಿಸುತ್ತೇವೆ ಎಂದು ಹೇಳಿತ್ತು. ಅದು ಆಯಿತೇ? ಇಲ್ಲ, ನೀವು ಜನರು ಅನಾರೋಗ್ಯಕ್ಕೆ ಒಳಗಾಗಬೇಕೆಂದು ನೀವು ಬಯಸುತ್ತೀರಾ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್ ತಮ್ಮ ಎಕ್ಸ್​​ಚ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಬಿಜೆಪಿ ನೇತೃತ್ವದ ದೆಹಲಿ ಸರ್ಕಾರವು ನ್ಯಾಯಾಲಯದ ಆದೇಶಗಳನ್ನು ಕಾರ್ಯಗತಗೊಳಿಸುವಲ್ಲಿ ವಿಫಲವಾಗಿದೆ ಎಂದು ಟೀಕಿಸಿದ್ದಾರೆ.

ದೆಹಲಿಯ ಹೆಚ್ಚಿನ ಭಾಗಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ 400 ದಾಟಿದೆ, ಗಾಳಿಯು ಉಸಿರುಗಟ್ಟಿಸುತ್ತಿದೆ, ಮತ್ತು ಜನರು ಹೊರಗೆ ಹೆಜ್ಜೆ ಇಡಲು ಸಹ ಸಾಧ್ಯವಾಗುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ 11 ವರ್ಷಗಳ ಕಾಲ ಪ್ರಧಾನಿಯಾಗಿದ್ದಾರೆ, ಈಗ ಬಿಜೆಪಿ ದೆಹಲಿಯಲ್ಲಿ ಪಟಾಕಿ ಸಿಡಿಸಲು ನ್ಯಾಯಾಲಯದ ಮೊರೆ ಹೋದ ಮುಖ್ಯಮಂತ್ರಿಯನ್ನು ಅಧಿಕಾರದಲ್ಲಿ ತಂದು ಕೂಡಿಸಿದೆ. ಮುಖ್ಯಮಂತ್ರಿ ರೇಖಾ ಗುಪ್ತಾ ಮತ್ತು ದೆಹಲಿ ಪೊಲೀಸರು ನ್ಯಾಯಾಲಯದ ಆದೇಶವನ್ನು ಜಾರಿಗೆ ತರಲು ವಿಫಲರಾದರು ಮತ್ತು ಮಧ್ಯರಾತ್ರಿಯವರೆಗೆ ಪಟಾಕಿಗಳನ್ನು ಸಿಡಿಸಲಾಯಿತು. ಈ ವಿಷಕಾರಿ ಗಾಳಿಯು ಮಕ್ಕಳು ಮತ್ತು ವೃದ್ಧರಿಗೆ ಅಪಾಯವನ್ನುಂಟುಮಾಡುತ್ತಿದೆ. ಬಿಜೆಪಿ ಸರ್ಕಾರ ದೆಹಲಿ ಮತ್ತು ಅದರ ಜನರನ್ನು ಸಂಪೂರ್ಣವಾಗಿ ವಿಫಲಗೊಳಿಸಿದೆ ಎಂದು ಹೇಳಿದರು.

ಬಿಜೆಪಿ ಪ್ರತಿಕ್ರಿಯೆ

ವಿಪಕ್ಷ ಆಪ್​ನ ಎಲ್ಲ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ಮಾಲಿನ್ಯಕ್ಕೆ ಇತರ ರಾಜ್ಯಗಳಲ್ಲಿ ಕೃಷಿ ಕೂಳೆ ಸುಡುವುದೇ ಕಾರಣ ಎಂದು ಉತ್ತರಿಸಿದೆ. ನೆರೆಯ ರಾಜ್ಯಗಳಿಂದ ಬರುವ ಮಾಲಿನ್ಯದ ಹೊರೆಯನ್ನು ದೆಹಲಿ ಎದುರಿಸುತ್ತಿದೆ, ಸುಪ್ರೀಂ ಕೋರ್ಟ್‌ನ ಆಕ್ಷೇಪಣೆಯ ಹೊರತಾಗಿಯೂ ಕೃಷಿ ಕೂಳೆಯನ್ನು ಸುಡಲಾಗುತ್ತಿದೆ ಎಂದು ದೆಹಲಿ ಪರಿಸರ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಹೇಳಿದ್ದಾರೆ.

ಪಂಜಾಬ್ ಕೂಳೆ ಸುಡುವುದನ್ನು ನಿಲ್ಲಿಸದ ಹೊರತು ದೆಹಲಿ ಉಸಿರುಗಟ್ಟಿಸುವುದನ್ನು ಮುಂದುವರಿಸುತ್ತದೆ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಪ್ರತಿಕ್ರಿಯೆ ನೀಡಿದ್ದು, ಆಮ್ ಆದ್ಮಿ ಪಕ್ಷದ ಪಾಪಗಳಿಗೆ ದೀಪಾವಳಿಯನ್ನು ದೂಷಿಸುವುದನ್ನು ನಿಲ್ಲಿಸಿ, ಹಬ್ಬದ ದೀಪಗಳು ಅಥವಾ ಪಟಾಕಿಗಳಲ್ಲ, ಅವರ ಹೊಗೆ ದೆಹಲಿಯ ಆಕಾಶವನ್ನು ಕತ್ತಲೆಗೊಳಿಸುತ್ತದೆ. ಅವರ ಕರಾಳ ನೆರಳು ಇನ್ನೂ ರಾಜಧಾನಿಯ ಮೇಲೆ ದೊಡ್ಡದಾಗಿ ಆವರಿಸಿದೆ ಎಂದು ತಿರುಗೇಟು ನೀಡಿದರು.(ಏಜೆನ್ಸೀಸ್​)