ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆಯ ದಂಡದ ಬಾಕಿ ಮೊತ್ತ ಪಾವತಿಗೆ ನೀಡಿರುವ ಶೇ.50 ವಿನಾಯಿತಿಯ ಕಾಲಮಿತಿಯನ್ನು ಮೂರು ತಿಂಗಳು ವಿಸ್ತರಿಸಬೇಕು ಎಂಬುದಾಗಿ ಆಮ್ ಆದ್ಮಿ ಪಕ್ಷ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿಕೊಂಡಿದೆ.
ಆಪ್ನ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಅವರು ಸಿಎಂ ಬೊಮ್ಮಾಯಿ ಅವರಿಗೆ ಈ ಸಂಬಂಧ ಪತ್ರ ಬರೆದಿದ್ದು, ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಶಿಫಾರಸಿನಂತೆ, ವಾಹನ ಸವಾರರು ಬಾಕಿ ಉಳಿಸಿಕೊಂಡಿರುವ ದಂಡವನ್ನು ಫೆ. 11ರೊಳಗೆ ಪಾವತಿಸಿದಲ್ಲಿ ಶೇ. 50 ವಿನಾಯಿತಿ ನೀಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹೀಗೆ ವಿನಾಯಿತಿ ನೀಡುವ ಮೂಲಕ ವಾಹನಸವಾರರಿಗೆ ನೆರವಾಗುವುದು ಸ್ವಾಗತಾರ್ಹ. ಆದರೆ ಅತ್ಯಲ್ಪ ಅವಧಿಯ ಕಾಲಮಿತಿ ನಿಗದಿಪಡಿಸುವ ಮೂಲ ಕೇವಲ ಶ್ರೀಮಂತ ವಾಹನಸವಾರರಿಗೆ ಮಾತ್ರ ನೆರವಾಗಲು ರಾಜ್ಯ ಸರ್ಕಾರ ಮುಂದಾಗಿರುವುದು ಖಂಡನೀಯ ಎಂದು ಅವರು ಹೇಳಿದ್ದಾರೆ.