ನ್ಯೂಸ್

Akhilesh Yadav | ನಕಲಿ ಮತದಾನ ತಡೆಯಲು ಆಧಾರ್​ ಕಾರ್ಡ್​ಗಳಿಗೆ ಚಿಪ್​ ಅಳವಡಿಸಿ : ಅಖಿಲೇಶ್ ಯಾದವ್

Akhilesh Yadav: ನಕಲಿ ಆಧಾರ್ ಕಾರ್ಡ್​​ಗಳ ಮೂಲಕ ಅಕ್ರಮವಾಗಿ ಮತ ಚಲಾಯಿಸುವುದನ್ನು ತಡೆಯಲು ಆಧಾರ್​​ನೊಂದಿಗೆ ಚಿಪ್‌ಗಳನ್ನು ಅಳವಡಿಸಬೇಕೆಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಒತ್ತಾಯಿಸಿದರು.

ಚುನಾವಣಾ ಸಿದ್ಧತೆಯನ್ನು ಪರಿಶೀಲಿಸಲು ಮತ್ತು ಪಕ್ಷ ಸಂಘಟನೆಯ ಬಗ್ಗೆ ಚರ್ಚೆಯ ಸಮಯದಲ್ಲಿ, ಮೀಸಲಾತಿಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ರಾಷ್ಟ್ರವ್ಯಾಪಿ ಜಾತಿ ಜನಗಣತಿ ಅತ್ಯಗತ್ಯ ಎಂದ ಯಾದವ್​, ಪಿಡಿಎ (ಪಿಚ್ಡೆ, ದಲಿತರು, ಅಲ್ಪಸಂಖ್ಯಾತ) ಮೈತ್ರಿಕೂಟದ ಸಂಯೋಜಿತ ಬಲವು ಜನರ ನಿಜವಾದ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ ಅಭಿಪ್ರಾಯಪಟ್ಟರು.

ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆಗಳ ಬೇಡಿಕೆಯನ್ನು ಪುನರುಚ್ಚರಿಸಿದ ಅಖಿಲೇಶ್​​, ನ್ಯಾಯಯುತ ಚುನಾವಣೆಗಳನ್ನು ನಡೆಸಲು, ನಕಲಿ ಆಧಾರ್ ಐಡಿಗಳನ್ನು ಸೃಷ್ಟಿಸುವ ಮೂಲಕ ಅಕ್ರಮವಾಗಿ ಮತ ಚಲಾಯಿಸುವುದನ್ನು ತಡೆಯಲು ಆಧಾರ್ ಕಾರ್ಡ್‌ಗಳನ್ನು ಚಿಪ್‌ಗಳೊಂದಿಗೆ ಜೋಡಿಸುವುದು ಅವಶ್ಯವಾಗಿದೆ ಎಂದು ತಿಳಿಸಿದ್ದಾರೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಿರುವ ಕೇಂದ್ರ ಸರ್ಕಾರ, ಸಮಾಜದಲ್ಲಿ ವಿಭಜನೆ ಮತ್ತು ದ್ವೇಷವನ್ನು ಉತ್ತೇಜಿಸುವ ಮೂಲಕ ಸಮಾನತೆ, ಸ್ವಾತಂತ್ರ್ಯ ಮತ್ತು ಸಹೋದರತ್ವವನ್ನು ವ್ಯವಸ್ಥಿತವಾಗಿ ತುಳಿಯುತ್ತಿದೆ, ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತತೆಯನ್ನು ನಾಶಮಾಡಲು ಯೋಜಿತ ಪಿತೂರಿಗಳು ನಡೆಯುತ್ತಿವೆ. ಚುನಾವಣಾ ಆಯೋಗ ಕೂಡ ಪರಿಶೀಲನೆಗೆ ಒಳಗಾಗಿದೆ ಎಂದು ಯಾದವ್ ಟೀಕಿಸಿದರು.

ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ, ಪಕ್ಷದ ಕಾರ್ಯಕರ್ತರು ತಮ್ಮ ಜವಾಬ್ದಾರಿಗಳನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದ ಅಖಿಲೇಶ್​, ಸಂದರ್ಭಕ್ಕೆ ತಕ್ಕಂತೆ ಕೆಲಸ ಮಾಡಬೇಕೆಂದು ಒತ್ತಾಯಿಸಿದರು. ಮತದಾರರ ಪಟ್ಟಿಗಳ ಮೇಲೆ ನಿಗಾ ಇಡಲು, ಬೆಂಬಲಿಗರ ಸೇರ್ಪಡೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ತಳಮಟ್ಟದಿಂದ ಪಕ್ಷವನ್ನು ಬಲಪಡಿಸಲು ಕಾರ್ಯಕರ್ತರಿಗೆ ನಿರ್ದೇಶನ ನೀಡಿದರು. ಬಿಜೆಪಿಯ ಪ್ರಾಬಲ್ಯದ ಅಂತ್ಯ ಕಾಣುವ ಎಲ್ಲ ಲಕ್ಷಣಗಳಿದ್ದು, ರಾಜ್ಯದ ಜನರು ಬದಲಾವಣೆಗೆ ಸಿದ್ಧರಾಗಿದ್ದಾರೆ, 2027 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ, ಎಸ್ಪಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.(ಏಜೆನ್ಸೀಸ್​​)