ನ್ಯೂಸ್

ಕುಡಿದ ಅಮಲಿನಲ್ಲಿ ಬೈಕ್​ಗೆ ಡಿಕ್ಕಿ ಹೊಡೆದ ಪೊಲೀಸ್​ ಪೇದೆ: ಜೊಮಾಟೊ ಡೆಲಿವರಿ ಬಾಯ್ ಸ್ಥಳದಲ್ಲೇ ಸಾವು

ನವದೆಹಲಿ: ಕುಡಿದ ಅಮಲಿನಲ್ಲಿ ಕಾರು ಚಲಾಯಿಸಿಕೊಂಡು ಬಂದ ಪೊಲೀಸ್​ ಪೇದೆಯೊಬ್ಬ ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಜೊಮಾಟೊ ಡೆಲಿವರಿ ಬಾಯ್​ ಸ್ಥಳದಲ್ಲೇ ಮೃತಪಟ್ಟ ಘಟನೆ ದೆಹಲಿಯ ರೋಹಿಣಿಯ ಬುಧ್ ವಿಹಾರ್ ಪ್ರದೇಶದಲ್ಲಿ ಸಂಭವಿಸಿದೆ.

38 ವರ್ಷದ ಸಲೀಲ್ ತ್ರಿಪಾಠಿ ಮೃತ ದುರ್ದೈವಿ. ಶನಿವಾರ ರಾತ್ರಿ ಗ್ರಾಹಕರಿಗೆ ಊಟ ತಲುಪಿಸಲು ಸಲೀಲ್​ ತ್ರಿಪಾಟಿ ಬೈಕ್​ನಲ್ಲಿ ತೆರಳುತ್ತಿದ್ದರು. ಕುಡಿದ ಅಮಲಿನಲ್ಲಿ ಕಾರು ಚಲಾಯಿಸಿಕೊಂಡು ಮಾರ್ಗಮಧ್ಯೆ ಜವರಾಯನಂತೆ ಬಂದ ರೋಹಿಣಿಯ ಉತ್ತರ ಪೊಲೀಸ್ ಠಾಣೆ ಪೇದೆ ಮಹೇಂದ್ರ, ಬೈಕ್​ಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ರಭಸಕ್ಕೆ ಬೈಕ್​ನಿಂದ ಹಾರಿ ರಸ್ತೆ ಡಿವೈಡರ್​ ಮೇಲೆ ಬಿದ್ದ ಜೊಮಾಟೊ ಡೆಲಿವರಿ ಬಾಯ್​, ತೀವ್ರ ರಕ್ತಸ್ವಾವಾಗಿ ಸ್ಥಳದಲ್ಲೇ ಕೊನೆಯುಸಿರೆಳೆದರು.

ಸಲೀಲ್ ತ್ರಿಪಾಠಿ ಅವರ ತಂದೆ ಕಳೆದ ವರ್ಷದ ಕರೊನಾ ಸೋಂಕಿಗೆ ಬಲಿಯಾಗಿದ್ದರು. ಮನೆಗೆ ಸಲೀಲ್​ ತ್ರಿಪಾಠಿಯೇ ಆಧಾರಸ್ತಂಭವಾಗಿದ್ದರು. ಇದೀಗ ಪೊಲೀಸಪ್ಪನ ಕುಡಿತಕ್ಕೆ ಸಲೀಲ್​ ಕೂಡ ಬಲಿಯಾಗಿದ್ದು, ಮೃತನ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಆರೋಪಿ ಮಹೇಂದ್ರನನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಪ್ರಣವ್ ತಾಯಲ್ ತಿಳಿಸಿದ್ದಾರೆ.