ಬೆಂಗಳೂರು: ಮನುಷ್ಯನ ಜೀವನ ನೀರಿನ ಮೇಲಿನ ಗುಳ್ಳೆಯಂತೆ, ಹಗ್ಗದ ಮೇಲಿನ ನಡಿಗೆಯಂತೆ, ಯಾವಾಗ ಏನಾಗುತ್ತದೋ ಗೊತ್ತಿಲ್ಲ. ಹಾಗೆ ಇಂದಿನ ಯುವಕ, ಯುವತಿಯರ ಪ್ರೀತಿಯಾಗಿದೆ. ಪ್ರೀತಿಸಿ ಕೈ ಕೊಡುವವರ ಸಂಖ್ಯೆ ಎಷ್ಟು ಹೆಚ್ಚಾಗುತ್ತಿದೆಯೋ ಅದೇ ರೀತಿ ಪ್ರೀತಿಗಾಗಿ ಪ್ರಾಣವನ್ನೇ ಬಿಡುವವರ ಸಂಖ್ಯೆಯೂ ಕಡಿಮೆಯೇನಿಲ್ಲ.
ವಿದ್ಯಾಶ್ರೀ ಮೃತ ಯುವತಿ. ಈಕೆಯ ಪ್ರಿಯಕರ ಅಕ್ಷಯ್. ಪ್ರೀತಿಸಿದ ಹುಡುಗ ದೂರವಾಗುತ್ತಿದ್ದಾನೆಂದು ಮನನೊಂದ ಯುವತಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬೆಂಗಳೂರು ಉತ್ತರ ತಾಲ್ಲೂಕು ಕೆಂಪಾಪುರದಲ್ಲಿ ಈ ಘಟನೆ ನಡೆದಿದೆ.
ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವಿದ್ಯಾಶ್ರೀ ಅಲ್ಲೇ ಜತೆಗೆ ಕೆಲಸ ಮಾಡುತ್ತಿದ್ದ ಅಕ್ಷಯ್ನನ್ನು ಪ್ರೀತಿಸುತ್ತಿದ್ದಳು. ಪ್ರಿಯಕರ ತನ್ನಿಂದ ದೂರ ಹೋಗುತ್ತಿದ್ದಾನೆಂದು ವಿದ್ಯಾಶ್ರೀ ಅನುಮಾನಗೊಂಡು ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಳು. ಈ ಘಟನೆ ಕಳೆದ ಜೂನ್ 22ರಂದು ನಡೆದಿದೆ.
ನಿನ್ನೆ ವಿದ್ಯಾಶ್ರೀ ಮನೆಯಲ್ಲಿ ಕುಟುಂಬಸ್ಥರ ಕೈಗೆ ಡೆತ್ ನೋಟ್ ಸಿಕ್ಕಿದೆ. ಡೆತ್ ನೋಟ್ನಲ್ಲಿ ಪ್ರಿಯಕರನ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾದ ಬೆನ್ನಲ್ಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ದೂರಿನ ಹಿನ್ನೆಲೇ ಅಕ್ಷಯ್ನನ್ನು ಠಾಣೆಗೆ ಕರೆತಂದು ವಿಚಾರಣೆ ಮಾಡಲಾಗಿದೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.