ನ್ಯೂಸ್

ಯುವತಿಗೆ ಲೈಂಗಿಕ ಕಿರುಕುಳ ಕೊಟ್ಟವನಿಗೆ ಸ್ಥಳೀಯರೇ ಕೊಟ್ರು ಗೂಸಾ...

ಬೆಂಗಳೂರು: ಕಾಟನ್​ಪೇಟೆಯ ರಸ್ತೆಯಲ್ಲಿ ಹೋಗುತ್ತಿದ್ದ ಯುವತಿ ಜತೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ ಯುವಕನನ್ನು ಸ್ಥಳೀಯರು ಹಿಡಿದು ಗೂಸಾ ಕೊಟ್ಟು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಕಾಟನ್​ಪೇಟೆಯ ಓಬಯ್ಯಲೇನ್ ನಿವಾಸಿ 20 ವರ್ಷದ ಯುವತಿ ಸಂತ್ರಸ್ತೆ. ಆಕೆ ಕೊಟ್ಟ ದೂರಿನ ಮೇರೆಗೆ ಸಿದ್ಧಾರ್ಥನಗರ ನಿವಾಸಿ ಮಹಮ್ಮದ್ ಫಯಾಜ್ (21) ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶನಿವಾರ (ಏ.25) ಮಧ್ಯಾಹ್ನ 2 ಗಂಟೆಯಲ್ಲಿ ಯುವತಿ ಅಕ್ಕಿಪೇಟೆ ಮುಖ್ಯರಸ್ತೆಯಲ್ಲಿರುವ ಚಿಕ್ಕ ಮಾರ್ಕೆಟ್​ಗೆ ತರಕಾರಿ ತರಲು ಓಬಯ್ಯಲೇನ್ 1ನೇ ಕ್ರಾಸ್​ನಲ್ಲಿ ತೆರಳುತ್ತಿದ್ದಾಗ ಎದುರಿಗೆ ಬಂದ ಫಯಾಜ್, ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ. ಆಗ ಯುವತಿ ಆರೋಪಿಯನ್ನು ಹಿಡಿದು ಕಿರುಚಾಡಿ ಮುಖ್ಯರಸ್ತೆಗೆ ಎಳೆದುಕೊಂಡು ಬಂದಿದ್ದಾಳೆ. ಆಕೆಯ ಕೈ ಕಚ್ಚಿ ಓಡಿ

ಹೋಗಲು ಆರೋಪಿ ಯತ್ನಿಸಿದಾಗ ಗಮನಿಸಿದ ಸ್ಥಳೀಯರು ಆರೋಪಿಯನ್ನು ಬೆನ್ನಟ್ಟಿ ಹಿಡಿದು ಗೂಸಾ ನೀಡಿದ್ದಾರೆ. ಕೆಂಗೇರಿ ಸೇರಿ ಹಲವು ಠಾಣೆಗಳಲ್ಲಿ ಈತ ವಿರುದ್ಧ ಅಪರಾಧ ಪ್ರಕರಣಗಳಿವೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.