ಕೈರೋ: ಬರ್ತ್ ಡೇ ಪಾರ್ಟಿಗಳ ಕೇಕ್ ಹೇಗಿರಬೇಕು? ಚಿಕ್ಕ ಮಕ್ಕಳಿಗಾದರೆ ಡಾಲ್, ಮಿಕ್ಕಿ ಮೌಸ್ ಹೀಗೆ ವಿಶೇಷ ವಿನ್ಯಾಸದ ಕೇಕ್ ತಯಾರಿಸುವುದನ್ನು ನೀವು ನೋಡಿರುತ್ತೀರಿ. ಆದರೆ ಇಲ್ಲೊಬ್ಬಳು ಮಹಿಳೆ ಬರ್ತ್ ಡೇ ಪಾರ್ಟಿಗಾಗಿ ತಯಾರಿಸಿದ್ದ ಕೇಕ್ ಅದೆಷ್ಟು ವಿಚಿತ್ರವಾಗಿತ್ತೆಂದರೆ ಕೇಕ್ ನೋಡಿದ ಪೊಲೀಸರು ಸೀದಾ ಬಂದು ಕೇಕ್ ಮಾಡಿದ ಮಹಿಳೆಯನ್ನು ಬಂಧಿಸಿ ಕರೆದೊಯ್ದಿದ್ದಾರೆ.
ಇಂತದ್ದೊಂದು ವಿಚಿತ್ರ ಘಟನೆ ಈಜಿಪ್ಟ್ನಲ್ಲಿ ನಡೆದಿದೆ. ಇತ್ತೀಚೆಗೆ ಕೈರೋ ಸ್ಪೋರ್ಟ್ ಕ್ಲಬ್ನಲ್ಲಿ ಬರ್ತ್ ಡೇ ಪಾರ್ಟಿ ಒಂದನ್ನು ಹಮ್ಮಿಕೊಳ್ಳಲಾಗಿತ್ತು. ಆ ಪಾರ್ಟಿಗೆ ನೋಂದಣಿ ಪಡೆದಿರುವ ಚೆಫ್ ಮಹಿಳೆ ಪೇಸ್ಟ್ರಿ ತಯಾರಿಸಿ ಕೊಟ್ಟಿದ್ದಾರೆ. ಅಂದ ಹಾಗೆ ಸಣ್ಣ ಸಣ್ಣ ಕಪ್ ಕೇಕ್ಗಳನ್ನೇ ಪಾರ್ಟಿಗೆ ತರಿಸಲಾಗಿದೆ. ಈ ಎಲ್ಲ ಕೇಕ್ಗಳ ಮೇಲೆ ಗಂಡು ಮಕ್ಕಳ ಮರ್ಮಾಂಗ ಮತ್ತು ಹೆಣ್ಣ ಮಕ್ಕಳ ಒಳುಡುಪಿನ ಚಿತ್ರವನ್ನು ಡಿಸೈನ್ ಮಾಡಲಾಗಿದೆ. ಈ ವಿಶೇಷ ಕೇಕ್ಗಳ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲೂ ಹರಿಬಿಡಲಾಗಿದೆ.
ಕೇಕ್ಗಳ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ಅಲ್ಲಿನ ಪೊಲೀಸರು ತಕ್ಷಣ ಕೇಕ್ ತಯಾರಿಸಿದ್ದ ಮಹಿಳೆಯನ್ನು ಬಂಧಿಸಿದ್ದಾರೆ. ಧಾರ್ಮಿಕವಾಗಿ ಇಂತಹ ಕೆಲಸ ಮಾಡುವುದು ನಿಷಿದ್ಧ ಎಂದು ಹೇಳಲಾಗಿದೆ. ಇದೀಗ ಈ ರೀತಿ ಕೇಕ್ ಮಾಡಿಸುವುದರ ಹಿಂದೆ ಕ್ಲಬ್ನ ಕೈವಾಡವೂ ಇದೆಯೇ ಎನ್ನುವುದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಧಾರ್ಮಿಕ ಚಿಂತನೆಗಳನ್ನು ನಂಬುವ ದೇಶದಲ್ಲಿ ಈ ರೀತಿ ಅಸಭ್ಯ ಕೆಲಸ ಮಾಡಿರುವುದು ತಪ್ಪು ಎಂದು ತಿಳಿಸಲಾಗಿದೆ. ಬಂಧಿತಳಾಗಿದ್ದ ಮಹಿಳೆ ಜಾಮೀನು ಪಡೆದು ಹೊರಬಂದಿರುವುದಾಗಿ ಹೇಳಲಾಗಿದೆ. (ಏಜೆನ್ಸೀಸ್)