ಬೆಂಗಳೂರು: ಅನ್ನಪೂರ್ಣೇಶ್ವರಿ ನಗರದಲ್ಲಿ ಪತ್ನಿಯನ್ನೇ ಕೊಂದಿದ್ದ ಫೈನಾನ್ಶಿಯರ್ ಕೇಸ್ನ ತನಿಖೆಯಲ್ಲಿ ಸ್ಫೋಟಕ ರಹಸ್ಯ ಬಯಲಾಗಿದೆ. ಆರೋಪಿಯನ್ನ ಬಂಧಿಸುವಲ್ಲಿ ಪೊಲೀಸರು ಸ್ವಲ್ಪ ತಡ ಮಾಡಿದ್ದರೂ ಇನ್ನಿಬ್ಬರು ಕೊಲೆಯಾಗಿ ಬಿಡುತ್ತಿದ್ದರು!
ಸೆ.22ರ ಸಂಜೆ ಅನ್ನಪೂರ್ಣೇಶ್ವರಿನಗರದಲ್ಲಿ ಫೈನಾನ್ಶಿಯರ್ ಕಾಂತರಾಜ್ ಅವರ ಪತ್ನಿ ರೂಪಾ(34) ಕೊಲೆಯಾಗಿದ್ದಳು. ಟ್ಯೂಷನ್ಗೆ ಹೋಗಿದ್ದ ಮಗ ವಾಪಸ್ ಮನೆಗೆ ಬಂದ ಪ್ರಕರಣ ಬೆಳಕಿಗೆ ಬಂದಿತ್ತು. ರೂಪಾಳನ್ನು ಗಂಡ ಕಾಂತರಾಜ್ನೇ ಕೊಲೆ ಮಾಡಿ ಧರ್ಮಸ್ಥಳಕ್ಕೆ ಹೋಗಿದ್ದ. ಅಷ್ಟೇ ಅಲ್ಲ, ತನ್ನ ತಂಗಿಯ ಗಂಡ ಹತ್ಯೆಗೂ ಸಂಚು ರೂಪಿಸಿದ್ದ. ಇದಾದ ಬಳಿಕ ಮತ್ತೊಬ್ಬ ಸಂಬಂಧಿಕನ ಹತ್ಯೆಗೂ ಪ್ಲಾನ್ ಹಾಕಿದ್ದ. ಅದಕ್ಕಾಗಿಯೇ ಕಾಂತರಾಜು ಬೆಂಗಳೂರಿಗೆ ವಾಪಸ್ ಬಂದಿದ್ದ. ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿ ಕಾಂತರಾಜುನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆತ ಬಾಯ್ಬಿಟ್ಟ ರಹಸ್ಯ ಬೆಚ್ಚಿಬೀಳಿಸುವಂತಿದೆ. ಪತ್ನಿಯನ್ನ ಏಕೆ ಕೊಂದೆ? ಅದಕ್ಕಾಗಿ ತಾನು ಎಣೆದ ತಂತ್ರ ಏನು ಎಂಬುದನ್ನೂ ಹೇಳಿದ್ದಾನೆ.
“ಬಾ ನಲ್ಲೆ ಮಧುಚಂದ್ರಕೆ” ಎಂಬ ಕನ್ನಡದ ಸೂಪರ್ ಹಿಟ್ ಸಿನಿಮಾ ಸ್ಟೈಲ್ನಲ್ಲೇ ಆರೋಪಿ ಕಾಂತರಾಜ್, ತನ್ನ ಪತ್ನಿ ಹತ್ಯೆಗೆ 15 ದಿನದ ಹಿಂದೆಯೇ ಸ್ಕೆಚ್ ರೆಡಿ ಮಾಡಿದ್ದ. ಅದರಂತೆ ಪತ್ನಿ ಜತೆ ಕರಾವಳಿ ಸುತ್ತಮುತ್ತ 2 ದಿನ ಟ್ರಿಪ್ಗೂ ಪ್ಲಾನ್ ಮಾಡಿದ್ದ. ಜೋಗ್ಪಾಲ್ಸ್ನಲ್ಲಿ ಎತ್ತರದಿಂದ ಕಳಕ್ಕೆ ನೂಕಿ ಕೊಲ್ಲಲು ಪ್ರಯತ್ನಿಸಿದ್ದ. ಆದರೆ ರೂಪಾ ತಲೆ ಸುತ್ತು ಎಂದು ಅಲ್ಲಿಗೆ ಹೋಗಲು ನಿರಾಕರಿಸಿದ್ದಳು. ಪ್ರವಾಸದಲ್ಲಿ ಕೊಲೆಗೆ ನಡೆಸಿದ ಯತ್ನ ವಿಫಲವಾಗಿತ್ತು. ಮನೆಗೆ ಬಂದಾಗ ನೇಣು ಹಾಕಿಕೊಂಡಿರುವಂತೆ ಬಿಂಬಿಸಲು ಯತ್ನಿಸಿದ್ದ. ಕೊನೆಗೆ ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದ.
ಪತ್ನಿಯ ಶೀಲವನ್ನು ಶಂಕಿಸುತ್ತಿದ್ದ ಕಾಂತರಾಜ್, ಇದೇ ವಿಚಾರಕ್ಕೆಮನೆಯಲ್ಲಿ ಜಗಳ ಮಾಡುತ್ತಿದ್ದ. ತಂಗಿಯ ಗಂಡ ಮತ್ತು ಮತ್ತೊಬ್ಬನೊಂದಿಗೆ ಪತ್ನಿ ರೂಪಾಗೆ ಅಕ್ರಮ ಸಂಬಂಧ ಇದೆ ಎಂದು ಅನುಮಾನ ವ್ಯಕ್ತಪಡಿಸಿದ್ದ ಕಾಂತರಾಜು, ಮೂವರ ಕೊಲೆಗೂ ಸಂಚು ರೂಪಿಸಿದ್ದ.