ನ್ಯೂಸ್

ಅಪಘಾತದಲ್ಲಿ ಪತ್ನಿ ಸತ್ತಳು ಎಂದು ಕಣ್ಣೀರಿಟ್ಟ ಗಂಡ! ಸ್ಥಳ ಪರಿಶೀಲನೆ ವೇಳೆ ಸಿಕ್ಕ ಸುಳಿವು ಬೆನ್ನಟ್ಟಿದ ಪೊಲೀಸರಿಗೆ ಕಾದಿತ್ತು ಶಾಕ್​

ಹಾಸನ: ನನ್ನ ಪತ್ನಿ ಬೈಕ್​ ಅಪಘಾತದಲ್ಲಿ ಸತ್ತು ಹೋದಳು... ಮೂರು ವರ್ಷದಿಂದ ನನ್ನೊಂದಿಗೆ ಇದ್ದ ಪ್ರೀತಿ ಇನ್ನಿಲ್ಲ... ಎಂದು ಸಂಬಂಧಿಕರಿಗೆ ಕರೆ ಮಾಡಿ ಕಣ್ಣೀರಿಟ್ಟಿದ್ದ ಗಂಡ. ಮೃತಳ ಸಂಬಂಧಿಕರೂ ಅಯ್ಯೋ, ವಿಧಿಯೇ ನೀನೆಂಥಾ ಕ್ರೂರಿ? ಚಿಕ್ಕ ವಯಸ್ಸಿಗೇ ಪ್ರೀತಿಯ ಪ್ರಾಣ ತೆಗೆದುಬಿಟ್ಟೆಯಾ... ಎಂದು ಗೋಳಾಡುತ್ತಾ ಸ್ಥಳಕ್ಕೆ ದೌಡಾಯಿಸಿದ್ದರು. ಅತ್ತ ಪ್ರೀತಿಯ ಗಂಡ ಆಸ್ಪತ್ರೆಗೆ ದಾಖಲಾಗಿದ್ದ. ಈ ಸುದ್ದಿ ತಿಳಿಯುತ್ತಿದ್ದಂತೆ ಅಪಘಾತ ನಡೆದಿದೆ ಎನ್ನಲಾದ ಸ್ಥಳಕ್ಕೆ ಭೇಟಿ ಕೊಟ್ಟ ಪೊಲೀಸರಿಗೆ ಸಿಕ್ಕ ಸುಳಿವೇ ಬೇರೆ! ಅದರ ಬೆನ್ನಟ್ಟಿದ ಪೊಲೀಸರೇ ಸಾವಿನ ರಹಸ್ಯ ಕಂಡು ಅರೆಕ್ಷಣ ಶಾಕ್​ ಆಗಿದ್ದಾರೆ.

ಪ್ರೀತಿ (23) ಮೃತ ದುರ್ದೈವಿ. ಈಕೆಯ ಗಂಡ ಮಹೇಶ್ (32) ಆರೋಪಿ. ಅರಕಲಗೂಡು ತಾಲೂಕಿನ ಉಪ್ಪಾರಕೊಪ್ಪಲಿನ ಪ್ರೀತಿಯನ್ನು ಮೂರು ವರ್ಷದ ಹಿಂದೆ ಅರಕಲಗೂಡು ತಾಲೂಕಿನ ಹುಲಿಕಲ್ ಕ್ರಾಸ್ ಬಳಿಯ ನಿವಾಸಿ ಮಹೇಶ್​ ಮದುವೆ ಆಗಿದ್ದ. ದಂಪತಿ ಇಬ್ಬರೂ ಹುಲಿಕಲ್ ಕ್ರಾಸ್​ನಲ್ಲಿ ವಾಸವಿದ್ದರು.

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಕುಡಿದ ಅಮಲಿನಲ್ಲಿ ಮಂಗಳವಾರ ರಾತ್ರಿ ಪ್ರೀತಿಯನ್ನು ಮಹೇಶ್​ ಕೊಲೆ ಮಾಡಿದ್ದ. ಮರುದಿನ ಬೆಳಗ್ಗೆ ಬೈಕ್ ಅಪಘಾತವಾಗಿ ನನ್ನ ಪತ್ನಿ ಸತ್ತಿದ್ದಾಳೆ ಎಂದು ಪ್ರೀತಿಯ ಸಂಬಂಧಿಕರಿಗೆ ಕರೆ ಮಾಡಿ ಮಹೇಶ್​ ಕಣ್ಣೀರಿಟ್ಟಿದ್ದ. ಅಲ್ಲದೆ, ತನಗೂ ಗಾಯವಾಗಿದೆ ಎಂದು ಆಸ್ಪತ್ರೆ ಸೇರಿದ್ದ. ಸ್ಥಳಕ್ಕೆ ಬಂದ ಆಂಬುಲೆನ್ಸ್​ನಲ್ಲಿ ಮೃತದೇಹವನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಅಪಘಾತ ನಡೆದಿತ್ತು ಎನ್ನಲಾದ ಸ್ಥಳದ ಬಗ್ಗೆ ಅನುಮಾನಗೊಂಡ ಅರಕಲಗೂಡು ಠಾಣೆ ಪೊಲೀಸರು, ಮಹೇಶ್​ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕೃತ್ಯ ಬಯಲಾಗಿದೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಹೈಡ್ರಾಮ ಮಾಡಿದ ಆರೋಪಿ ಕೊನೆಗೂ ಸಿಕ್ಕಿ ಬಿದ್ದಿದ್ದಾನೆ. (ದಿಗ್ವಿಜಯ ನ್ಯೂಸ್​)