ನ್ಯೂಸ್

ಸ್ವಾಗತಾರ್ಹ ಕ್ರಮ; ಕೇಂದ್ರದ ನಿರ್ಧಾರದಿಂದ ರೈತರಿಗೆ ಹಲವು ಆಯಾಮಗಳಲ್ಲಿ ಅನುಕೂಲ

ಹೊಸ ವರ್ಷದ ಹೊಸ್ತಿಲಲ್ಲೇ ಕೇಂದ್ರ ಸರ್ಕಾರ ರೈತರಿಗೆ ನೆರವಾಗುವಂಥ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿರುವುದು, ಕೃಷಿ ವಲಯಕ್ಕೆ ಸಕಾರಾತ್ಮಕ ಸಂದೇಶವನ್ನು ರವಾನಿಸಿದೆ. ಹವಾಮಾನ ವೈಪರೀತ್ಯ, ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ದೊರೆಯದಿರುವುದು ಸೇರಿದಂತೆ ಹಲವು ಗಂಭೀರ ಸಮಸ್ಯೆಗಳಿಂದ ಕೃಷಿಕರು ಹೈರಾಣಾಗಿದ್ದಾರೆ. ಮತ್ತೊಂದೆಡೆ, ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ದೆಹಲಿ ಗಡಿಯಲ್ಲಿ ರೈತ ಸಂಘಟನೆಗಳ ಪ್ರತಿಭಟನೆ ಮುಂದುವರಿದಿದೆ. ಈ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿರುವ ಕೇಂದ್ರ ಸರ್ಕಾರ ಮತ್ತಷ್ಟು ಕೃಷಿಸ್ನೇಹಿ ನೀತಿಗಳನ್ನು ಪ್ರಕಟಿಸುವ ಮೂಲಕ ಸುಧಾರಣೆಯ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿದೆ. ಈ ಸುಧಾರಣಾ ಕ್ರಮಗಳು ಸಮರ್ಪಕವಾಗಿ ಅನುಷ್ಠಾನಕ್ಕೆ ಬರುವುದು ಮುಖ್ಯ.

ಡೈ-ಅಮೋನಿಯಂ ಫಾಸ್ಪೇಟ್ (ಡಿಎಪಿ) ಸುಸ್ಥಿರವಾಗಿ ಲಭ್ಯವಾಗುವಂತೆ ಮಾಡಲು ಎನ್​ಬಿಎಸ್ ಸಬ್ಸಿಡಿಯಾಚೆಗಿನ ಏಕ ಸಮಯದ ವಿಶೇಷ ಪ್ಯಾಕೇಜ್ ಅನ್ನು ಇದೇ ಜನವರಿ 1ರಿಂದ ಮುಂದಿನ ಆದೇಶದವರೆಗೆ ವಿಸ್ತರಿಸಲು ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ತೀರ್ವನಿಸಲಾಗಿದೆ. ಈ ವಿಸ್ತರಣೆಯಿಂದ ಬೊಕ್ಕಸಕ್ಕೆ 3,850 ಕೋಟಿ ರೂಪಾಯಿ ಹೆಚ್ಚುವರಿ ಹೊರೆಯಾಗಲಿದೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (ಪಿಎಂಎಫ್​ಬಿವೈ) ಮತ್ತು ಪುನರ್​ರಚಿತ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯನ್ನು 2025-26ನೇ ಸಾಲಿಗೆ ಮುಂದುವರಿಸುವುದಕ್ಕೂ ಸಂಪುಟ ಸಭೆ ಸಮ್ಮತಿಸಿರುವುದು ಗಮನಾರ್ಹ. ‘ಫಸಲ್ ಬಿಮಾ, ಪುನರ್ ರಚಿಸಲಾದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಗಳ ಒಟ್ಟು ವೆಚ್ಚವನ್ನು 66,550 ಕೋಟಿ ರೂ.ಯಿಂದ 69,550 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಇದರಿಂದ ನೈಸರ್ಗಿಕ ವಿಕೋಪಗಳಿಂದ ಬೆಳೆ ರಕ್ಷಿಸಿಕೊಳ್ಳಲು ರೈತರಿಗೆ ನೆರವಾಗಲಿದೆ’ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಈ ನಿರ್ಧಾರಗಳ ಬಗ್ಗೆ ಸಂತಸ ವ್ಯಕ್ತಪಡಿಸುತ್ತ, ‘ಬೆಳೆ ವಿಮಾ ಯೋಜನೆಗೆ ಹೆಚ್ಚಿನ ಹಂಚಿಕೆ ಅನುಮೋದಿಸಿದ್ದೇವೆ. ಇದು ರೈತರಿಗೆ ಹೆಚ್ಚಿನ ಭದ್ರತೆ ಒದಗಿಸುತ್ತದೆ. ಕೈಗೆಟುಕುವ ಬೆಲೆಯಲ್ಲಿ ರಸಗೊಬ್ಬರವನ್ನು ಖಾತ್ರಿಪಡಿಸುತ್ತದೆ. ಅಷ್ಟೇ ಅಲ್ಲ ಬೆಳೆ ಹಾಗೂ ಹಾನಿಯ ಆತಂಕವನ್ನೂ ತಗ್ಗಿಸಲು ನೆರವಾಗುತ್ತದೆ’ ಎಂದು ಹೇಳಿದ್ದಾರೆ.

ರೈತರ ದೀರ್ಘಕಾಲದ ಮತ್ತೊಂದು ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲೂ ಸರ್ಕಾರ ಮುಂದಡಿ ಇಟ್ಟಿದೆ. ‘ಕೃಷಿ ಉತ್ಪನ್ನಗಳ ಏಕರೂಪದ ಮಾರುಕಟ್ಟೆಗಾಗಿ’ ಕರಡು ರಾಷ್ಟ್ರೀಯ ನೀತಿಯ ಚೌಕಟ್ಟನ್ನು ರೂಪಿಸಲು ಕೇಂದ್ರ ಮುಂದಾಗಿದೆ. ಒಂದೇ ಪರವಾನಗಿ/ನೋಂದಣಿ ವ್ಯವಸ್ಥೆ ಮತ್ತು ಏಕ ಶುಲ್ಕದ ಮೂಲಕ ಇದನ್ನು ಸಾಧಿಸುವುದು ಸರ್ಕಾರದ ಚಿಂತನೆಯಾಗಿದೆ. ಈ ಪ್ರಸ್ತಾಪಿತ ನೀತಿಯ ಕರಡನ್ನು ಕೃಷಿ ಸಚಿವಾಲಯ ಬಿಡುಗಡೆ ಮಾಡಿ ಸಂಬಂಧಪಟ್ಟವರಿಂದ ಸಲಹೆ ಸೂಚನೆಗಳನ್ನು ಕೋರಿತ್ತು. ಕೃಷಿ ಮಾರುಕಟ್ಟೆ ಸುಧಾರಣೆಗೆ ಈ ನೀತಿ ಪೂರಕವಾಗಲಿದ್ದು, ಖಾಸಗಿ ಸಗಟು ಮಾರ್ಕೆಟ್​ಗಳ ಸ್ಥಾಪನೆಗೆ ಅವಕಾಶ ಸಿಗಲಿದೆ. ಮಾರುಕಟ್ಟೆ ಶುಲ್ಕ ಮತ್ತು ಕಮಿಷನ್ ಶುಲ್ಕಗಳ ಸುಧಾರಣೆ ಆಗಲಿದೆ.

ರೈತರ ಕುರಿತಾಗಿ ಬರೀ ಭಾವನಾತ್ಮಕ ಮಾತುಗಳಿಂದ ಪ್ರಯೋಜನವಿಲ್ಲ. ಅವರ ಜೀವನಸ್ತರವನ್ನು ಎತ್ತರಿಸುವ, ಅದಕ್ಕಾಗಿ ಆದಾಯ ಹೆಚ್ಚಿಸುವ, ಸಂಕಷ್ಟದ ಸಂದರ್ಭದಲ್ಲಿ ನೆರವಿಗೆ ಬರುವ ಇಚ್ಛಾಶಕ್ತಿ ಮುಖ್ಯ. ಹಲವು ಸರಣಿ ತೀರ್ವನಗಳ ಮೂಲಕ ಈ ಇಚ್ಛಾಶಕ್ತಿಯನ್ನು ಸರ್ಕಾರ ಪ್ರಕಟಿಸಿದ್ದು, ಮುಂಬರುವ ದಿನಗಳಲ್ಲಿ ಕೃಷಿ ರಂಗದ ಸುಧಾರಣೆ ಹೊಸ ಆಯಾಮವನ್ನು ಪಡೆದುಕೊಳ್ಳಲಿ, ರೈತರ ಬದುಕಿಗೆ ನೆಮ್ಮದಿ ಒದಗಲಿ ಎಂಬುದೇ ಆಶಯ.