ಶ್ರೀ ವಸಿಷ್ಠರು ಶ್ರೀರಾಮನಿಗೆ ಯುದ್ಧವನ್ನು ವರ್ಣಿಸುತ್ತಿದ್ದಾರೆ. ಈ ಹಿಂದೆ ಅಲ್ಲಿದ್ದು ನೋಡುತ್ತಿರುವವರ ದೃಷ್ಟಿಯಲ್ಲಿ ಯುದ್ಧವನ್ನು ವರ್ಣಿಸಿದ್ದಾರೆ. ಈಗ ಯುದ್ಧವನ್ನು ಒಂದು ಸಮುದ್ರವಾಗಿ ಅವರು ವರ್ಣಿಸುತ್ತಿದ್ದಾರೆ. ಅನೇಕ ಲಕ್ಷಗಟ್ಟಲೆ ಸೈನಿಕರು ಯುದ್ಧರಂಗಕ್ಕೆ ಇಳಿದಾಗ ಅದೊಂದು ಸಮುದ್ರದಂತೆ ಕಂಡರೆ ಆಶ್ಚರ್ಯವೇನಿಲ್ಲ. ಯುದ್ಧರಂಗದಲ್ಲಿರುವ ಅಲ್ಲೋಲ-ಕಲ್ಲೋಲ ವಾತಾವರಣವು ಅದು ಸಮುದ್ರದಂತೆ ಕಾಣಲು ಇನ್ನೊಂದು ಕಾರಣವಾಗಿದೆ. ಈ ಮಂಡಪೋಪಾಖ್ಯಾನದ ಮತ್ತು ಅದರೊಳಗಿನ ಯುದ್ಧದ ವರ್ಣನೆಯ ಉದ್ದೇಶವನ್ನು ಮರೆಯಬಾರದು. ಜಗತ್ತು ಪರಬ್ರಹ್ಮದ ಒಂದು ತೋರಿಕೆಯೇ ವಿನಃ ವಾಸ್ತವಿಕವಲ್ಲ.
ಜಗತ್ತು ಸಮುದ್ರ ದಂತೆ ಅಗಾಧವೂ ಅನಂತವೂ ಆಗಿರಬಹುದು, ಆದರೂ ಅದು ಪರಮಾರ್ಥ ಸತ್ಯವಲ್ಲ. ಇದನ್ನು ತೋರಿಸುವುದೇ ಯುದ್ಧ ಸಮುದ್ರದ ವರ್ಣನೆಯ ಉದ್ದೇಶ. ಜಗತ್ತು ತೋರಿಕೆ ಎಂದರೇನು? ಇದು ಜನಸಾಮಾನ್ಯರು ಅಂದುಕೊಳ್ಳುವಷ್ಟು ಸಣ್ಣ-ಸುಲಭ ವಿಷಯವಲ್ಲ. ಆದ್ದರಿಂದಲೇ ಅದನ್ನು ಅನುಭವಕ್ಕೆ ಬರುವಂತೆ ಮಾಡಲು ಶ್ರೀದೇವಿಯು ಲೀಲಾಮಹಾರಾಣಿಗೆ ಸಮಾಧಿಸ್ಥಿತಿಯನ್ನು ಉಂಟುಮಾಡಿಸಿ, ಅವಳಿಗೆ ಅನೇಕ ಲೋಕ-ಲೋಕಾಂತರಗಳನ್ನು ತೋರಿಸಿ, ಈಗ ಯುದ್ಧರಂಗವನ್ನು ತೋರಿಸಲು ಕರೆದು ಕೊಂಡು ಬಂದಿದ್ದಾಳೆ. ಹಾಗಾಗಿ ಲೀಲಾಮಹಾರಾಣಿಯು ಸೂಕ್ಷ್ಮರೂಪ ದಿಂದ ಆಕಾಶದಲ್ಲಿದ್ದುಕೊಂಡು ಯುದ್ಧವನ್ನು ನೋಡುತ್ತಿದ್ದಾಳೆ.
ಶ್ರೀ ವಸಿಷ್ಠರು ಮುಂದುವರಿದು ಹೇಳುತ್ತಿದ್ದಾರೆ - ‘ಶ್ರೀರಾಮ! ಯುದ್ಧರಂಗದಲ್ಲಿ ಮತ್ತಗಜಗಳ ಸಮೂಹವು ಯುದ್ಧದಲ್ಲಿ ತೊಡಗಿ ಕೊಂಡ ವೈರಿಸೈನ್ಯದ ಆನೆಗಳೊಂದಿಗೆ ತಿಕ್ಕಾಟ ನಡೆಸಿಕೊಳ್ಳುತ್ತಿದೆ. ಆ ತಿಕ್ಕಾಟವನ್ನು ನೋಡಿದರೆ ಆಮೂಲಾಗ್ರ ಚಂಚಲವಾಗಿರುವ ಮಂದರಾದಿ ಕುಲಪರ್ವತಗಳು ತಮ್ಮ ಬಲಾಬಲದ ಪರೀಕ್ಷೆಗೆ ತಿಕ್ಕಿಕೊಳ್ಳುತ್ತಿರುವಂತೆ ಕಾಣುತ್ತಿದೆ. (ಮಂದರಾದಿ ಏಳು ಕುಲಪರ್ವತಗಳು ಸಮುದ್ರದಲ್ಲಿ ನಿಂತಿವೆ ಎಂಬುದಾಗಿ ಪುರಾಣದಲ್ಲಿ ಪ್ರಸಿದ್ಧವಾಗಿದೆ.) ಆ ಯುದ್ಧವೆಂಬ ಸಮುದ್ರದಲ್ಲಿ ಬೀಳುತ್ತಿರುವ ತಲೆಗಳನ್ನು ನೋಡಿದರೆ ಭಯವಾಗುವಂತಿತ್ತು. ನೂರಾರು ಚಕ್ರಾಯುಧಗಳ ತಿರುಗುವಿಕೆಯಲ್ಲಿ ಶತ್ರುಸೈನಿಕರ ತಲೆಗಳು ಹುಲ್ಲುಕಡ್ಡಿಯಂತೆ ಕತ್ತರಿಸಲ್ಪಟ್ಟು ಬೀಳುತ್ತಿವೆ. ಅದು ಸಮುದ್ರದ ಚಕ್ರಾಕಾರದ ಅಲೆಗಳಲ್ಲಿ ಬಿದ್ದು ಸುತ್ತುತ್ತಿರುವ ಹುಲ್ಲುಕಡ್ಡಿಗಳಂತೆ ಕಾಣುತ್ತಿದೆ. ಯುದ್ಧರಂಗದ ಭೂಮಿಯಿಂದ ಎದ್ದಿರುವ ಧೂಳು ಎಷ್ಟು ದಟ್ಟವಾಗಿತ್ತೆಂದರೆ, ಮೋಡದಂತೆ ಕವಿದಿರುವ ಧೂಳಿನಿಂದ, ಸೈನಿಕರಿಂದ ಝುಳಪಿಸಲ್ಪಡುತ್ತಿರುವ ಖಡ್ಗಗಳ ಪ್ರಭೆಯು ನೀರಿನಂತೆ ಕುಡಿಯಲ್ಪಟ್ಟಿತ್ತು.’ (ದಟ್ಟವಾದ ಧೂಳು ಖಡ್ಗಗಳ ಪ್ರಭೆಯನ್ನು ಆಚ್ಛಾದಿಸಿತ್ತು ಎಂಬುದು ತಾತ್ಪರ್ಯ.)
‘ಯುದ್ಧರಂಗವೆಂಬ ಸಮುದ್ರದಲ್ಲಿ ಸೇನೆಯ ವಿಸ್ತಾರವಾದ ಮಕರವ್ಯೂಹ (ಮೊಸಳೆಗಳ ಸಮೂಹ) ದಿಂದಾಗಿ ಒಂದಷ್ಟು ಮೊಸಳೆಯ ಆಕಾರದ ಒಂದು ವಿಧದ ಸೈನ್ಯವ್ಯೂಹ ಅಥವಾ ಒಂದಷ್ಟು ಭಟರೆಂಬ ನೌಕೆಗಳು ಭಗ್ನವಾಗಿವೆ. ಒಂದಷ್ಟು ಭಟರೆಂಬ ನೌಕೆಗಳು ಉಳಿದುಕೊಂಡಿವೆ. ದೊಡ್ಡದಾಗಿ ‘ಗುಡು ಗುಡು’ ಎಂಬ ಶಬ್ದವು ಮೋಡಗಳ ಕಂದರಗಳಿಂದ ಮತ್ತು ಪರ್ವತಗಳ ಗುಹೆಗಳಿಂದ ಪ್ರತಿಧ್ವನಿಸಿ ಬರುತ್ತಿವೆ.’ ‘ಸಮುದ್ರದ ಮೀನುಗಳ ಸಮೂಹ ದಿಂದ (ಮೀನುಗಳ ಮಲದ ಜೊತೆಗೆ) ಹೊರಬಂದ ಜೊಂಡುಹುಲ್ಲಿನ ಶುಭ್ರ ಬೀಜಗಳು ಸಮುದ್ರದ ದಡದಲ್ಲಿ ಹರಡಿ ಕೊಂಡಿರುವಂತೆ, ಮರಣ ಹೊಂದುತ್ತಿರುವ ಸೈನಿಕ ಸಮೂಹವನ್ನು ಭೇದಿಸಿ ಹೊರಬಂದ ಬಾಣಗಳು ಯುದ್ಧರಂಗದ ಹೊರಗಿನ ಭೂಮಿಯಲ್ಲಿ ಬೀಳುತ್ತಿರುವ ಮತ್ತು ಬಿದ್ದಿರುವ ದೃಶ್ಯ ಮನಸ್ಸನ್ನು ಕಲಕುವಂತಿತ್ತು. ಯುದ್ಧಸಮುದ್ರದಲ್ಲಿ ಯುದ್ದಾಯುಧಗಳ ಪ್ರಬಲ ತೆರೆಗಳು ಪತಾಕೆಗಳ ತೆರೆಗಳನ್ನು ಹಿಮ್ಮೆಟ್ಟಿಸುತ್ತಿವೆ.’
‘ವಿವಿಧ ಶಸ್ತ್ರಗಳೆಂಬ ನೀರಿನಿಂದ ಮೋಡಗಳಂತೆ ಅಸ್ಥಿರವಾದ ಆವರ್ತಗಳು (ಸುಳಿಯಂತಿರುವ ತೆರೆಗಳು) ಕುಂಡಲ (ವೃತ್ತಾಕಾರದ ಆಭರಣ) ದಂತೆ ಕಾಣುತ್ತಿದ್ದವು. ಅಂದರೆ ಒಂದೇ ವಿಧದ ಆಯುಧಗಳನ್ನು ಹಿಡಿದಿರುವ ಸೈನಿಕರ ವೃತ್ತಾಕಾರದ ಸಾಲುಗಳು ಆಗಾಗ ಬದಲಾಗುತ್ತಿವೆ. ಆಯುಧಗಳ ಬದಲಾವಣೆ ಇದಕ್ಕೆ ಕಾರಣ. ಅಂದರೆ ಒಂದು ಸಲಕ್ಕೆ ಒಂದೇ ರೀತಿ ಆಯುಧ ಪೂರೈಕೆ ಆಗಿದ್ದು, ಆ ಆಯುಧವು ಭಗ್ನಗೊಳ್ಳುತ್ತಿರುವಂತೆ ಮತ್ತೊಂದು ಸಲಕ್ಕೆ ಇನ್ನೊಂದು ರೀತಿಯ ಆಯುಧವು ಅಲ್ಲಿರುವ ಎಲ್ಲ ಸೈನಿಕರಿಗೆ ಪೂರೈಕೆ ಆಗುತ್ತಿವೆ. ಕ್ರೋಧದ ಆವೇಶದಲ್ಲಿ ಮುಖ ಗಂಟಿಕ್ಕಿಕೊಂಡಿರುವ ಮತ್ತು ಕಣ್ಣುಗಳನ್ನು ಕೆಂಪಗೆ ಮಾಡಿಕೊಂಡಿರುವ ಸೈನಿಕರಿರುವ ಸೇನೆಗಳನ್ನು ಮತ್ತು ಅವು ಅತ್ತಿತ್ತ ಸಂಚರಿಸುತ್ತಿರುವುದನ್ನು ನೋಡಿದರೆ ಎಲ್ಲವನ್ನೂ ನುಂಗಿಹಾಕಿಬಿಡುತ್ತೇನೆಂಬ ಭರದಲ್ಲಿ ಸುತ್ತುತ್ತಿರುವ ತಿಮಿ ಮತ್ತು ತಿಮಿಂಗಲ (ದೊಡ್ಡ ಮೀನುಗಳ ಬೇರೆ ಬೇರೆ ಪ್ರಭೇದಗಳು) ಗಳಂತೆ ಕಾಣುತ್ತಿತ್ತು.’
‘ಕಾಲುಷ್ಯದಿಂದ ಕೂಡಿದ ಸಮುದ್ರದ ಕಪ್ಪು ನೀರಿನ ಅಲೆಗಳಂತೆ, ಕೃಷ್ಣಾಯಸ (ಕಪ್ಪು ಕಬ್ಬಿಣ) ದಿಂದ ತಯಾರಿಸಿದ ಕವಚಗಳನ್ನು ಧರಿಸಿರುವ ಸೈನಿಕರ ಸೇನೆಯು ಚಲಿಸುತ್ತಿರುವುದರಿಂದ ಭಯಂಕರವಾಗಿತ್ತು. ಸಮುದ್ರದ ಆವರ್ತ (ಸುಳಿ) ಗಳ ಮಧ್ಯದಲ್ಲಿ ಪ್ರವೇಶಿಸಿಕೊಂಡು ಆ ಆವರ್ತಗಳ ಒಳಗೆ ಬರುವ ಜಲಸೇನೆ ಅಥವಾ ಜನರನ್ನು ತಿಂದುಹಾಕುವ ರಾಕ್ಷಸರಿರುತ್ತಾರೆ. (ಸಮುದ್ರದ ಮಧ್ಯದಲ್ಲಿ ಇಂತಹ ರಾಕ್ಷಸರಿರುವ ಕಥೆಗಳು ಪುರಾಣಗಳಲ್ಲಿ ಬರುತ್ತವೆ.) ಸಮುದ್ರದ ಅಂತಹ ಭಯಂಕರ ಪ್ರದೇಶಗಳಿಗೆ ಆ ರಾಕ್ಷಸರೇ ಭೂಷಣ. ಅಂದರೆ ರಾಕ್ಷಸರೇ ಆ ಪ್ರದೇಶಗಳ ಒಡೆಯರು. ಹಾಗೆಯೇ ಈ ಸೇನೆಗಳೆಂಬ ಸಮುದ್ರದ ಮಧ್ಯದಲ್ಲಿ ಎದ್ದಿರುವ ಕಬಂಧ (ತಲೆ ಕಡಿಯಲ್ಪಟ್ಟಿರುವುದರಿಂದ ತೂರಾಡುತ್ತ ಪ್ರಾಣ ಬಿಡುತ್ತಿರುವ ಮುಂಡ, ಕೈ-ಕಾಲುಗಳಿರುವ ಶರೀರ) ಗಳ ಆವರ್ತದ ಮಧ್ಯದಲ್ಲಿ ಪ್ರವೇಶಿಸಿಕೊಂಡಿರುವ, ಸೈನ್ಯವನ್ನೇ ತಿಂದುಹಾಕುವ ಮೃತ್ಯುದೇವತೆಯೇ ಯುದ್ಧರಂಗದ ಪ್ರದೇಶಕ್ಕೆ ಭೂಷಣ, ಅಂದರೆ ಆ ಪ್ರದೇಶಕ್ಕೆ ಒಡೆಯನಂತಿದೆ.