ಹಾಸನ: ವಿಧಾನ ಪರಿಷತ್ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಡಾ. ಸೂರಜ್ ರೇವಣ್ಣ ಸಲ್ಲಿಸಿರುವ ನಾಮಪತ್ರ ರದ್ದಾಗುತ್ತಾ? ಇಂತಹದ್ದೊಂದು ಪ್ರಶ್ನೆ ವಕೀಲ ಜಿ.ದೇವರಾಜೇಗೌಡ ಎಂಬುವರು ಸೂರಜ್ ವಿರುದ್ಧ ಮಾಡಿದ ಆರೋಪದ ಬೆನ್ನಲ್ಲೇ ಎದ್ದಿದೆ.
ನಾಮಪತ್ರದೊಂದಿಗೆ ಸೂರಜ್ ರೇವಣ್ಣ ಸಲ್ಲಿಸಿರುವ ಅಫಿಡವಿಟ್ನಲ್ಲಿ ತಮ್ಮ ಪತ್ನಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನೂ ಮರೆಮಾಚಿದ್ದಾರಂತೆ. ಜತೆಗೆ ಅವರ ಹೆಸರಿನ ಚಾಲ್ತಿ ಖಾತೆಯೊಂದರ ಹಣದ ವಿವರವನ್ನೂ ಮುಚ್ಚಿಟ್ಟಿದ್ದಾರಂತೆ. ಹೀಗಂತ ವಕೀಲ ಜಿ.ದೇವರಾಜೇಗೌಡ ಗಂಭೀರ ಆರೋಪ ಮಾಡಿದ್ದಾರೆ.
2017ರ ಮಾರ್ಚ್ 17ರಂದು ಸೂರಜ್ ಅದ್ದೂರಿಯಾಗಿ ಮದುವೆಯಾಗಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು. ಅವರ ಮದುವೆಯ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಿದೆ. ಆದರೆ, ಅಫಿಡವಿಟ್ನಲ್ಲಿ ಪತ್ನಿಯ ಮಾಹಿತಿ ನಮೂದಿಸುವ ಸ್ಥಳದಲ್ಲಿ ಅನ್ವಯಿಸುವುದಿಲ್ಲ ಎಂದು ಬರೆದಿದ್ದಾರೆ. ಅಲ್ಲದೆ, ಹೊಳೆನರಸೀಪುರದ ಕರ್ಣಾಟಕ ಬ್ಯಾಂಕ್ ಚಾಲ್ತಿ ಖಾತೆ ಸಂಖ್ಯೆ 608ರ ಹಣದ ಮಾಹಿತಿಯನ್ನೂ ಮುಚ್ಚಿಟ್ಟಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೇವರಾಜೇಗೌಡ ದೂರಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದೇನೆ. ಅವರು ಕ್ರಮ ಕೈಗೊಳ್ಳದಿದ್ದರೆ ಶುಕ್ರವಾರ ಬೆಳಗ್ಗೆ ಹೈಕೋರ್ಟ್ನಲ್ಲಿ ಚುನಾವಣಾ ತಕರಾರು ಅರ್ಜಿ ಸಲ್ಲಿಸುತ್ತೇನೆ. ಜನಪ್ರತಿನಿಧಿ ಕಾಯ್ದೆಯ ಅನ್ವಯ ಸೂರಜ್ ಮಾಡಿರುವುದು ಅಪರಾಧವಾಗುತ್ತದೆ. ಅವರ ನಾಮಪತ್ರ ತಿರಸ್ಕೃತ ಆಗಬೇಕಾಗುತ್ತದೆ ಎಂದಿದ್ದಾರೆ.