ನ್ಯೂಸ್

UPSC ಪರೀಕ್ಷೆ: ಡಾ.ರಾಜ್​ಕುಮಾರ್​ ಅಕಾಡೆಮಿಯ 8 ಮಂದಿಗೆ ರ‍್ಯಾಂಕ್​! ಸಾಧಕರಿಗೆ ಸಿಹಿ ತಿನ್ನಿಸಿ ಶುಭಕೋರಿದ ರಾಘಣ್ಣ

ಬೆಂಗಳೂರು: ಕೇಂದ್ರ ಲೋಕ ಸೇವಾ ಆಯೋಗದ(ಯುಪಿಎಸ್​ಸಿ) 2021-22ನೇ ಸಾಲಿನ ಅಖಿಲ ಭಾರತ ನಾಗರಿಕ ಸೇವಾ ಹುದ್ದೆಗಳ ನೇಮಕಾತಿ ಪರೀಕ್ಷೆ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ದೇಶಾದ್ಯಂತ 685 ಅಭ್ಯರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ಪೈಕಿ ಕರ್ನಾಟಕದವರೇ 30ಕ್ಕೂ ಹೆಚ್ಚು ಮಂದಿ ಇದ್ದಾರೆ. ಇವರಲ್ಲಿ 8 ಅಭ್ಯರ್ಥಿಗಳು ಡಾ.ರಾಜ್​ಕುಮಾರ್​ ಸಿವಿಲ್ ಸರ್ವೀಸ್ ಅಕಾಡೆಮಿಯಲ್ಲಿ ಕೋಚಿಂಗ್​ ಪಡೆದವರು. ಈ ಸುದ್ದಿ ಕೇಳಿ ಖುಷಿಗೊಂಡ ನಟ ರಾಘವೇಂದ್ರ ರಾಜ್​ಕುಮಾರ್​ ಅವರು ಸಾಧಕರನ್ನು ತಮ್ಮ ಮನೆಗೆ ಆಹ್ವಾನಿಸಿ ಸಿಹಿ ತಿನ್ನಿಸಿ ಶುಭಕೋರಿದರು.

8 ಸಾಧಕರ ಪೈಕಿ ಮೂವರು ರಾಘವೇಂದ್ರ ರಾಜ್​ಕುಮಾರ್​ ಅವರ ಮನಗೆ ಆಗಮಿಸಿದ್ದರು. ನಿಖಿಲ್ ಪಾಟೀಲ್(139 ರ‍್ಯಾಂಕ್), ದೀಪಕ್ ಆರ್.ಶೇಟ್(311 ರ‍್ಯಾಂಕ್​), ರವಿನಂದನ್(455 ರ‍್ಯಾಂಕ್​) ಅವರಿಗೆ ಹೂಗುಚ್ಛ ನೀಡಿ ಶುಭ ಕೋರಿದ ರಾಘಣ್ಣ, ಸಿಹಿ ತಿನ್ನಿಸಿ ಸಂತಸಗೊಂಡರು. ಅಪ್ಪಾಜಿ ಓದಿರಲಿಲ್ಲ, ಅವರ ಹೆಸರಿನಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡ್ತಿರೋದು ಖುಷಿ ಇದೆ. ಶ್ರೀಮಂತರ ಮಕ್ಕಳು ಹೇಗೆ ಓದ್ತಾರೋ ಹಾಗೇ ಬಡವರ ಮಕ್ಕಳೂ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂಬುದು ನಮ್ಮ ಆಸೆ ಎಂದರು.