ನ್ಯೂಸ್

ಮೇ 31ರ ಬಳಿಕ ಕೇಂದ್ರದಿಂದ ಮತ್ತೆರಡು ವಾರ ಲಾಕ್‌ಡೌನ್ ವಿಸ್ತರಣೆ ಸಾಧ್ಯತೆ

ನವದೆಹಲಿ: ಪ್ರಸ್ತುತ ಲಾಕ್‌ಡೌನ್ ಅವಧಿ ಮೇ 31ಕ್ಕೆ ಅಂತ್ಯಗೊಳ್ಳಲಿದ್ದು, ಕೇಂದ್ರ ಸರ್ಕಾರ ಮತ್ತೆ ಎರಡು ವಾರಗಳ ಅವಧಿಗೆ ಲಾಕ್‌ಡೌನ್ ವಿಸ್ತರಿಸುವ ಸಾಧ್ಯತೆ ಇದೆ. ಆದರೆ ಈಗಾಗಲೇ ಘೋಷಿಸಿರುವ ಸಡಿಲಿಕೆಗಳ ಜತೆ ಇನ್ನಷ್ಟು ಕ್ಷೇತ್ರಗಳಿಗೆ ಸಡಿಲಿಕೆಯನ್ನು ವಿಸ್ತರಿಸುವ ನಿರೀಕ್ಷೆಯೂ ಇದೆ.

ಮುಂದಿನ ಹಂತದ ಲಾಕ್‌ಡೌನ್‌ನಲ್ಲಿ ದೇಶದ ಶೇಕಡಾ 70ರಷ್ಟು ಕರೊನಾ ಕೇಸ್‌ಗಳಿರುವ 11 ರಾಜ್ಯಗಳ ಮೇಲೆ ಗಮನ ಕೇಂದ್ರೀಕೃತವಾಗಲಿದೆ. ಇದರಲ್ಲಿ ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ, ಅಹಮದಾಬಾದ್, ಕೋಲ್ಕತಾ, ಪುಣೆ, ಥಾಣೆ, ಜೈಪುರ, ಸೂರತ್ ಮತ್ತು ಇಂದೋರ್ ಇರಲಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಕರೊನಾ ತೀವ್ರತೆ ಹೆಚ್ಚಾಗಿರುವ ಪ್ರದೇಶಗಳಲ್ಲಿಯಾದರೂ ಲಾಕ್‌ಡೌನ್ ವಿಸ್ತರಿಸದೇ ಇದ್ದರೆ, ಈವರೆಗೆ ಎರಡು ತಿಂಗಳ ಕಾಲ ಮಾಡಿರುವ ಲಾಕ್‌ಡೌನ್ ಯಾವುದೇ ಪ್ರಯೋಜನಕ್ಕೆ ಬಾರದಂತೆ ಆಗುತ್ತದೆ. ಅಲ್ಲದೆ ದೇಶದ ವೈದ್ಯಕೀಯ ವ್ಯವಸ್ಥೆಯ ಮೇಲೂ ತಡೆದುಕೊಳ್ಳಲಾರದಷ್ಟು ಒತ್ತಡ ಉಂಟಾಗುತ್ತದೆ ಎಂಬುದು ಕೇಂದ್ರ ಸರ್ಕಾರದ ಲೆಕ್ಕಾಚಾರವಾಗಿದೆ.

ನಾಲ್ಕನೇ ಹಂತದ ಲಾಕ್‌ಡೌನ್‌ನಲ್ಲಿ ಸರ್ಕಾರ ಕಂಟೇನ್‌ಮೆಂಟ್ ವಲಯಗಳಿಗೆ ಮಾತ್ರ ನಿರ್ಬಂಧಗಳನ್ನು ವಿಧಿಸಿ ಉಳಿದೆಡೆ ಮಾರುಕಟ್ಟೆ, ಕಚೇರಿಗಳು, ಕೈಗಾರಿಕೆಗಳು, ವ್ಯಾಪಾರ ವಹಿವಾಟು, ಬಸ್-ರೈಲು-ವಿಮಾನಗಳ ಭಾಗಶಃ ಸಂಚಾರ ಆರಂಭಿಸುವುದಕ್ಕೆ ಅನುಮತಿ ನೀಡಿತ್ತು.

ಐದನೇ ಹಂತದಲ್ಲಿ ದೇವಸ್ಥಾನ ಮತ್ತಿತರ ಧಾರ್ಮಿಕ ಶ್ರದ್ಧಾ ಕೇಂದ್ರಗಳು, ಜಿಮ್‌ಗಳನ್ನು ಆರಂಭಿಸುವುದಕ್ಕೆ ಅನುಮತಿ ನೀಡುವ ಸಾಧ್ಯತೆ ಇದೆ. ಆದರೆ ಇವುಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್ ಧರಿಸುವುದು ಮುಂತಾದ ನಿಯಮಗಳನ್ನು ಕಡ್ಡಾಯಗೊಳಿಸಲಾಗುವುದು. ಆದರೆ ಜಾತ್ರೆ, ಸಮಾರಂಭ ಏರ್ಪಡಿಸುವುದಕ್ಕೆ ಅನುಮತಿಸುವುದಿಲ್ಲ ಎನ್ನಲಾಗಿದೆ.

ಆದರೆ ಲಾಕ್‌ಡೌನ್ 5.0ನಲ್ಲಿ ಕೂಡ ಶಾಲೆ-ಕಾಲೇಜುಗಳು, ಮಾಲ್‌ಗಳು, ಸಿನಿಮಾ ಹಾಲ್‌ಗಳು ಪ್ರಾರಂಭವಾಗುವ ಲಕ್ಷಣ ಇಲ್ಲ. ಕೆಲವು ರಾಜ್ಯಗಳು ಈಗಾಗಲೇ ಶಾಲೆ-ಕಾಲೇಜುಗಳನ್ನು ಆರಂಭಿಸಲು ಉತ್ಸುಕತೆ ತೋರಿಸಿದ್ದರೂ, ಇದಕ್ಕೆ ಅನುಮತಿ ನೀಡಲು ಕೇಂದ್ರ ಸರ್ಕಾರಕ್ಕೆ ಮನಸ್ಸಿಲ್ಲ ಎಂದು ಹೇಳಲಾಗಿದೆ.