ನ್ಯೂಸ್

ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಕ್ಕೆ ನೈಜ ಕಾರಣ ಬಿಚ್ಚಿಟ್ಟ ಸುರೇಶ್​ಗೌಡ

ತುಮಕೂರು: ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದ ಬಿ.ಸುರೇಶ್​ಗೌಡ ರಾಜೀನಾಮೆಯ ನೈಜ ಕಾರಣ ಬಿಚ್ಚಿಟ್ಟಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ.

ಕ್ಷೇತ್ರದ ನನ್ನ ಜನರಿಗೆ ಎಂದು ಉಲ್ಲೇಖಿಸಿ ಸುದೀರ್ಘ ಪತ್ರ ಬಿಡುಗಡೆ ಮಾಡಿರುವ ಬಿ.ಸುರೇಶ್​ಗೌಡ, ಶಾಸಕ ಡಿ.ಸಿ.ಗೌರಿಶಂಕರ್ ಹಾಗೂ ಸಚಿವ ಮಾಧುಸ್ವಾಮಿ ಇಬ್ಬರೂ ಸೇರಿ ರಾಜಕೀಯ ಕುತಂತ್ರ ಮಾಡುತ್ತಿದ್ದಾರೆ ಎಂದು ನೇರವಾಗಿಯೇ ಆರೋಪಿಸಿದ್ದಾರೆ. ನಾನು ಜಿಲ್ಲಾಧ್ಯಕ್ಷನಾಗಿದ್ದುಕೊಂಡು ನನ್ನ ಕ್ಷೇತ್ರದ ಕೆರೆಗಳಿಗೆ ನೀರು ಬಿಡಿಸಲು ಆಗದ ಕಾರಣ ಪಕ್ಷದ ಹುದ್ದೆ ತೊರೆದು ಮುನಿಸು ತೋರಿದ್ದೇನೆ ಎಂದು ಕಾರಣ ಬಿಚ್ಚಿಟ್ಟಿದ್ದಾರೆ.

ಯೋಜನೆಗೆ ಅನುಮತಿ ನೀಡಿದ ಅಂದಿನ ನೀರಾವರಿ ಸಚಿವ, ಈಗಿನ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೂ ಈ ಮೂಲಕ ಅವಮಾನ ಮಾಡಲಾಗಿದೆ, ಮುಖ್ಯಮಂತ್ರಿ ಅವರಿಗೂ ಈ ಬಗ್ಗೆ ಪತ್ರ ಬರೆಯುವೆ. ಯೋಜನೆ ಅವೈಜ್ಞಾನಿಕದ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಕೋರುತ್ತಿದ್ದೇನೆ ಎಂಬುದನ್ನು ನಿಮ್ಮಗಳ ಗಮನಕ್ಕೆ ತರುತ್ತಿದ್ದೇನೆ ಎಂದು ಪತ್ರ ಬರೆದು, ಮಾಧ್ಯಮಗಳಿಗೂ ಬಿಡುಗಡೆ ಮಾಡಿದ್ದಾರೆ.

ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಾನು ರಾಜೀನಾಮೆ ನೀಡಿದ ಬಳಿಕ ನನ್ನ ಜನರು ನನಗೆ ತೋರಿದ ಪ್ರೀತಿಯಿಂದ, ಕಂಗೆಟ್ಟಿರುವ ಶಾಸಕ ಡಿ.ಸಿ.ಗೌರಿಶಂಕರ್ ನನ್ನದೇ ಪಕ್ಷದ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಹೇಳಿಸಿರುವ ತುಮಕೂರು-ಗೂಳೂರು ಏತ ನೀರಾವರಿ ಯೋಜನೆ ಅವೈಜ್ಞಾನಿಕ ಎಂಬ ಮಾತುಗಳ ಹಿಂದಿನ ರಾಜಕೀಯ ಕುತಂತ್ರ ಅರಿಯದಷ್ಟು ನಾನು ದಡ್ಡನಲ್ಲ. ನನ್ನ ಕ್ಷೇತ್ರದ ಜನರೂ ದಡ್ಡರಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಗೂಳೂರು- ಹೆಬ್ಬೂರು ಏತ ನೀರಾವರಿ ಯೋಜನೆ ಅವೈಜ್ಞಾನಿಕ ಎಂಬ ಮಾಧುಸ್ವಾಮಿ ಅವರ ಮಾತುಗಳ ಹಿಂದೆ ಯಾರಿದ್ದಾರೆ ಎಂಬ ಅರಿವಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ನೀರನ್ನು ಬೇರೆಡೆ ತೆಗೆದುಕೊಂಡು ಹೋಗುವ ಹುನ್ನಾರವಿದೆ. ಅವೈಜ್ಞಾನಿಕದ ಹೆಸರಿನಲ್ಲಿ ನೀರು ನಿಂತರೆ ಇದನ್ನೇ ಮುಂದು ಮಾಡಿಕೊಂಡು ನನ್ನ ರಾಜಕೀಯ ಶಾಶ್ವತವಾಗಿ ಮುಗಿಸುವ ಕುತಂತ್ರವಿದೆ, ಇದಕ್ಕೆಲ್ಲಾ ಹೆದರುವ ಮನುಷ್ಯ ನಾನಲ್ಲ.

| ಬಿ.ಸುರೇಶ್​ಗೌಡ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ