ಐಫೋನ್ ಹಿಡಿದು ಕಿತ್ತಳೆ ಮಾರುತ್ತಿರುವ ವ್ಯಕ್ತಿ
- ಐಫೋನ್ ಹಿಡಿದು ಕಿತ್ತಳೆ ಮಾರುತ್ತಿರುವ ವ್ಯಕ್ತಿ
- ಐಫೋನ್ ಹಿಡಿದ ವ್ಯಕ್ತಿಯ ಫೋಟೊ ವೈರಲ್
- ಇದು ನಿಜವೋ ಸುಳ್ಳೋ ಎಂದು ಸಾಮಾಜಿಕ ಮಾಧ್ಯಮದಲ್ಲಿ ಕಮೆಂಟ್ ವಾರ್
ವೈರಲ್: ಇಂದಿನ ಕಾಲದಲ್ಲಿ ಐಫೋನ್ (I Phone) ಖರೀದಿಸುವುದು ಮಧ್ಯಮ ವರ್ಗದ ಜನರ ಪಾಲಿಗೆ ಒಂದು ದೊಡ್ಡ ಕನಸೆಂದರೆ ತಪ್ಪಾಗದು. ಆದರೆ ಲಕ್ಷ ಲಕ್ಷ ಸಂಬಳ ಪಡೆಯುವ ಐಟಿ ಉದ್ಯೋಗಿಗಳೂ ಕೂಡ ಇತ್ತೀಚಿನ ಐಫೋನ್ ಮಾಡೆಲ್ ಖರೀದಿಸುವ ಮುನ್ನ ಹತ್ತು ಬಾರಿ ಯೋಚಿಸುತ್ತಾರೆ.
ಆದರೆ, ಇತ್ತೀಚೆಗೆ ಬೀದಿ ಬದಿಯಲ್ಲಿ ಕಿತ್ತಳೆ ಹಣ್ಣು ಮಾರುವ ವ್ಯಾಪಾರಿಯೊಬ್ಬ ಆಪಲ್‌ನ ಅತ್ಯಂತ ದುಬಾರಿ ಐಫೋನ್ 17 ಪ್ರೊ ಮ್ಯಾಕ್ಸ್ ಹಿಡಿದು ವ್ಯಾಪಾರ ಮಾಡುತ್ತಿರುವ ಫೋಟೊ ಈಗ ಸಾಮಾಜಿಕ ಮಾಧ್ಯಮದಾದ್ಯಂತ ವೈರಲ್ ಆಗುತ್ತಿದೆ.
ಫೋಟೊದಲ್ಲೇನಿದೆ?
ವೈರಲ್ ಆಗಿರುವ ಚಿತ್ರದಲ್ಲಿ, ಕಿತ್ತಳೆ ಹಣ್ಣಿನ ಬುಟ್ಟಿಗಳ ಮುಂದೆ ಕುಳಿತಿರುವ ವ್ಯಾಪಾರಿಯೊಬ್ಬ ಅತ್ಯಂತ ಆರಾಮವಾಗಿ ಐಫೋನ್ 17 ಪ್ರೊ ಮ್ಯಾಕ್ಸ್‌ನಲ್ಲಿ ಮಾತನಾಡುತ್ತಾ ಕಿತ್ತಳೆ ಹಣ್ಣುಗಳನ್ನು ಜೋಡಿಸುತ್ತಿರುವ ಚಿತ್ರ ಸೆರೆಯಾಗಿದೆ. ವೈರಲ್ ಆಗಿರುವ ಈ ಚಿತ್ರಕ್ಕೆ ಅಡಿಬರಹವಾಗಿ ನಾವು ವರ್ಷಗಟ್ಟಲೆ ಕೆಲಸ ಮಾಡಿದರೂ 20 ಸಾವಿರದ ಫೋನ್ ಬಳಸುತ್ತಿದ್ದೇವೆ, ಆದರೆ ಈ ಹಣ್ಣನ್ನು ಮಾರುವವನು ಐಫೋನ್ ಹಿಡಿದಿದ್ದಾನೆ ಎಂದು ಬರೆದಿದ್ದಾರೆ.
ನೀವು ಉದ್ಯೋಗಿ, ಅವನು ಮಾಲೀಕ
ವೈರಲ್ ಆಗಿರುವ ಈ ಪೋಸ್ಟ್ಗೆ ಕಾಮೆಂಟ್‌ಗಳ ಸುರಿಮಳೆಯೇ ಹರಿದುಬಂದಿದ್ದು ನೀವು ಕೇವಲ ಒಬ್ಬ ಕಂಪನಿಯ ಉದ್ಯೋಗಿ ಅಷ್ಟೇ, ಆದರೆ ಅವರು ತಮ್ಮ ಸ್ವಂತ ವ್ಯವಹಾರದ ಮಾಲೀಕರು ಎಂದು ಒಬ್ಬ ಬಳಕೆದಾರ ಕಮೆಂಟ್ ಮಾಡಿದ್ದಾರೆ.
ಇನ್ನೊಬ್ಬರು, ನೀವು ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವವರು, ಅವರು ತೆರಿಗೆ ಇಲ್ಲದ ವ್ಯಾಪಾರ ಮಾಡುವವರು ಎಂದು ವ್ಯವಸ್ಥೆಯ ಮೇಲೆ ಇನ್ನೊಬ್ಬರು ವ್ಯಂಗ್ಯವಾಡಿದ್ದಾರೆ. ನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿದ್ದರೂ ನನ್ನ ಕೈಲಿರೋದು ಹಳೆ ಒಪ್ಪೋ ಫೋನ್ ಮಾತ್ರ ಎಂದು ಮತ್ತೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇದು ನಿಜವೋ ಅಥವಾ ಫಸ್ಟ್ ಕಾಪಿಯೋ?
ಈ ಫೋಟೊ ವೈರಲ್ ಆಗುತ್ತಿದ್ದಂತೆ ಈ ಚಿತ್ರದ ಸತ್ಯಾಸತ್ಯತೆಯ ಬಗ್ಗೆಯೂ ದೊಡ್ಡ ಚರ್ಚೆ ನಡೆಯುತ್ತಿದೆ. ಕೆಲವರು ಇದು ಕೇವಲ ಐಫೋನ್‌ನಂತೆ ಕಾಣುವ ಫೋನ್ ಕೇಸ್ ಇರಬಹುದು ಎಂದರೆ, ಇನ್ನು ಕೆಲವು ಟೆಕ್ ಪರಿಣಿತರು ಇದೊಂದು ಪಕ್ಕಾ ನಕಲಿ ಫೋನ್ ಎಂದು ವಾದಿಸುತ್ತಿದ್ದಾರೆ.
ದಯವಿಟ್ಟು ಸುಳ್ಳು ಹರಡಬೇಡಿ, ಮಾರ್ಕೆಟ್‌ನಲ್ಲಿ ಕೇವಲ 5-6 ಸಾವಿರ ರೂಪಾಯಿಗೆ ಐಫೋನ್ 17 ಪ್ರೊ ಮ್ಯಾಕ್ಸ್‌ನಂತೆಯೇ ಕಾಣುವ ನಕಲಿ ಫೋನ್‌ಗಳು ಸಿಗುತ್ತವೆ. ಚಾರ್ಜರ್, ಏರ್‌ಪಾಡ್ಸ್ ಸಮೇತ ಸಿಗುವ ಇಂತಹ ಫೋನ್ ಇದಾಗಿರಬಹುದು ಎಂದು ಒಬ್ಬರು ವಿವರಣೆ ನೀಡಿದ್ದಾರೆ. ಇನ್ನು ಕೆಲವರು ವೈರಲ್ ಆಗುವ ಸಲುವಾಗಿಯೇ ಯಾರೋ ಆ ವ್ಯಾಪಾರಿಗೆ ಫೋನ್ ನೀಡಿ ಫೋಟೋ ತೆಗೆಸಿಕೊಂಡಿರಬಹುದು ಎಂದಿದ್ದಾರೆ.
ಒಟ್ಟಿನಲ್ಲಿ ಚರ್ಚೆ ಮಾತ್ರ ಜೋರು
ಆ ಫೋನ್ ನಿಜವೋ ಅಥವಾ ನಕಲಿಯೋ ಎಂಬುದು ಇನ್ನೂ ಅಧಿಕೃತವಾಗಿ ತಿಳಿದುಬಂದಿಲ್ಲ. ಆದರೆ ಈ ಫೋಟೋ ಮಾತ್ರ ಒಂದು ವಿಷಯವನ್ನು ಸಾಬೀತುಪಡಿಸಿದೆ. ಅದೇನೆಂದರೆ, ಭಾರತದಲ್ಲಿ ಹಣ್ಣು ಮಾರುವವನಿಂದ ಹಿಡಿದು ದೊಡ್ಡ ಉದ್ಯಮಿಯವರೆಗೆ ಪ್ರತಿಯೊಬ್ಬರಿಗೂ ಐಫೋನ್ ಎನ್ನುವುದು ಒಂದು ಸ್ಟೇಟಸ್ ಸಿಂಬಲ್ಲಾಗಿ ಪರಿಣಮಿಸಿದೆ ಎಂದರೆ ತಪ್ಪಾಗದು,(ಏಜನ್ಸೀಸ್).