ಅಯೋಧ್ಯೆಯ ಆಸ್ಥಾನ ಮಂಟಪವು ಶ್ರೀವಸಿಷ್ಠರ ಅದ್ವಿತೀಯ ಉಪದೇಶಕ್ಕೆ ಸಾಕ್ಷಿಯಾಗುತ್ತಿದೆ. ಶ್ರೀ ವಸಿಷ್ಠರು ಶ್ರೀರಾಮನಿಗೆ ಯಾವ ಯಾವ ತಂತ್ರಗಳನ್ನು ಬಳಸಿ ಉಪದೇಶ ಮಾಡಿದರೋ ಇಂತಹ ತಂತ್ರಗಳಿಂದ ಕೂಡಿದ ಉಪದೇಶ ಪ್ರಪಂಚದಲ್ಲಿ ಇನ್ನು ಎಲ್ಲಿಯೂ ಸಿಗಲಿಕ್ಕಿಲ್ಲ. ಪ್ರಪಂಚವು ಪರಮಾರ್ಥ ಸತ್ಯವಲ್ಲ, ಪರಮಾರ್ಥ ಸತ್ಯವಾದ ಪರಮಾತ್ಮನ ಒಂದುವಿಧದ ತೋರಿಕೆ ಮಾತ್ರ ಎಂಬುದನ್ನು ಸಾಬೀತು ಪಡಿಸಲು ಅವರು ಹೆಣೆದಿರುವ ಮಂಡಪೋಪಾಖ್ಯಾನ ಅವರು ಬಳಸಿದ ತಂತ್ರಗಳಲ್ಲಿ ಮುಖ್ಯವಾದದ್ದು. ಸಮಾಧಿ ಸ್ಥಿತಿಗೆ ಏರುವ ಮೂಲಕ ಪ್ರಪಂಚವು ತೋರಿಕೆ ಎಂಬ ಯಥಾಸ್ಥಿತಿಯನ್ನು ಕಂಡುಕೊಳ್ಳಬಹುದು ಎಂಬುದು ಈ ಮಂಡಪೋಪಾಖ್ಯಾನದ ಸಾರಾಂಶ. ಅದಕ್ಕಾಗಿ ಸುಂದರವಾಗಿ ಲೀಲಾ ಮಹಾರಾಣಿಯ ಕಥೆಯನ್ನು ಹೆಣೆದಿದ್ದಾರೆ.
ಶ್ರೀದೇವಿಯ ಅನುಗ್ರಹದಿಂದ ಸಮಾಧಿಸ್ಥಿತಿಯನ್ನು ಪಡೆದ ಲೀಲಾಮಹಾರಾಣಿ ಸೂಕ್ಷ್ಮರೂಪದಲ್ಲಿ ಹಿಂದಿನ ಜನ್ಮದ ವೃತ್ತಾಂತವು ಘಟಿಸಿದ ಇನ್ನೊಂದು ಲೋಕದಲ್ಲಿರುವ ಗಿರಿಗ್ರಾಮಕ್ಕೆ ಹೋಗಿಬಂದಿದ್ದಾಳೆ. ಈಗ ತನ್ನ ಪತಿಯ ಮುಂದಿನ ಜನ್ಮದ ಘಟನೆಗಳು ನಡೆಯುತ್ತಿರುವ ಸ್ಥಳಕ್ಕೆ ಬಂದಿದ್ದಾಳೆ. ಅವಳ ಪತಿಯಾಗಿದ್ದ ಪದ್ಮಮಹಾರಾಜನು ಈಗ ಭಾರತವರ್ಷ ಭಾರತದೇಶದಲ್ಲಿ ವಿದೂರಥ ಎಂಬ ಹೆಸರಿನಿಂದ ಜನ್ಮ ಪಡೆದು ಈಗಲೂ ಚಕ್ರವರ್ತಿಯಾಗಿದ್ದಾನೆ. ಅವನ ಸಾಮಂತರಾಜರಲ್ಲಿ ಕೆಲವರು ಅವನ ವಿರುದ್ಧ ತಿರುಗಿ ಬಿದ್ದಿದ್ದರಿಂದ ಯುದ್ಧದ ವಾತಾವರಣ ನಿರ್ವಣವಾಗಿದೆ. ಈಗ ಘನಘೊರ ಯುದ್ಧ ನಡೆಯುತ್ತಿದೆ. ಯುದ್ಧದ ಭಯಂಕರ ದೃಶ್ಯವನ್ನು ಅನೇಕ ದೇವತೆಗಳು ಸೂಕ್ಷ್ಮರೂಪದಿಂದ ಆಕಾಶದಲ್ಲಿ ಕುಳಿತು ನೋಡುತ್ತಿದ್ದಾರೆ. ಲೀಲಾ ಮಹಾರಾಣಿ ಶ್ರೀದೇವಿಯ ಜೊತೆಯಲ್ಲಿ ಆಕಾಶದಲ್ಲಿ ವಿಮಾನದಲ್ಲಿ ಕುಳಿತು ನೋಡುತ್ತಿದ್ದಾಳೆ. ಕಣ್ಣಿಗೆ ಕಟ್ಟಿದಂತೆ ಯುದ್ಧದ ವರ್ಣನೆ ಮಾಡಲು ಕವಿಗೆ ವಿಶೇಷ ಸಾಮರ್ಥ್ಯವಿರಬೇಕಾಗುತ್ತದೆ. ಇಲ್ಲಿ ವಾಲ್ಮೀಕಿ ಮಹರ್ಷಿಗಳು ಅಂತಹ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ಸಂಸ್ಕೃತದಲ್ಲಿಯೇ ಯೋಗವಾಸಿಷ್ಠ ಓದಿದರೆ ವಾಲ್ಮೀಕಿ ಮಹರ್ಷಿಗಳ ವಿಶಿಷ್ಟ ಪ್ರತಿಭೆ ಅರಿವಾಗುತ್ತದೆ.
ಶ್ರೀ ವಸಿಷ್ಠರು ಹೇಳಿದರು : ‘ಶ್ರೀರಾಮ ! ಆ ಘೂರಯುದ್ಧದಲ್ಲಿ ಮದಿಸಿದ ಆನೆಗಳು ಆಯುಧಗಳ ಆಘಾತಕ್ಕೆ ಒಳಗಾಗಿ ಭೂಮಿಗೇ ಉರುಳಿ ಬೀಳುತ್ತಿದ್ದವು. ಮಹಾಭಾರವುಳ್ಳ ಆನೆಯ ಶರೀರವು ಭೂಮಿಯಲ್ಲಿ ಬೀಳುವಾಗ ಭೂಮಿಯೇ ಕಂಪಿಸುತ್ತಿತ್ತು. ಆದ್ದರಿಂದಲೇ ಆನೆಯ ಬೆನ್ನಮೇಲೆ ಕುಳಿತ ಯೋಧರು ನೆಲಕ್ಕೆ ಬಿದ್ದು ಓಡಿ ಹೋಗಲಾರದೆ ನೆಲದಲ್ಲಿಯೆ ಬಿದ್ದು ಹೊರಳಾಡುತ್ತಿದ್ದರು. ಶಬ್ದ ಮಾಡುತ್ತಾ ವೇಗವಾಗಿ ಓಡಿದ ರಥಗಳ ಚಕ್ರಗಳ ದಾರಿಗಳಲ್ಲಿ ರಕ್ತದ ಹೊಳೆ ಹರಿಯುತ್ತಿತ್ತು. ಯುದ್ಧರಂಗದ ಮೇಲೆ ದೂಳಿನ ಕಣಗಳ ಇಬ್ಬನಿ ಆವರಿಸಿಕೊಂಡಿತ್ತು. ಆಗಾಗ ಎಸೆಯಲ್ಪಟ್ಟ ಆಯುಧಗಳ ಹೊಳಪಾದ ಪ್ರವಾಹ ಆ ಇಬ್ಬನಿಯ ಮಧ್ಯೆ ಕಂಡು ಬರುತ್ತಿತ್ತು. ಸೇನೆಗಳ ಘರ್ಜನೆ ಘೊಷವು ಸಮುದ್ರದ ತೆರೆಗಳ ಘರ್ಜನೆಗೆ ಸಮವಾಗಿ ಕೇಳುತ್ತಿತ್ತು.’ ‘‘ಮೃತ್ಯುದೇವತೆ ಮದವೇರಿದ ನಗುವಿನೊಂದಿಗೆ ಆಟವಾಡುತ್ತಾ ಅಲ್ಲಿರುವ ಜನರನ್ನು ತಿಂದುಹಾಕುತ್ತಿದ್ದಾಳೆ ಎನ್ನುವಂತೆ ಕಾಣುತ್ತಿತ್ತು. ಯುದ್ಧರಂಗದಲ್ಲಿರುವ ದೊಡ್ಡ ದೊಡ್ಡ ಪರ್ವತಗಳಂತಹ ಆನೆಗಳು ತಮ್ಮ ಎತ್ತರ ದಿಂದಲೂ ಮತ್ತು ಘರ್ಜನೆಯಿಂದಲು ಮೋಡಗಳ ಎತ್ತರವನ್ನು ಮತ್ತು ಮೋಡಗಳ ಘರ್ಜನೆ ಯನ್ನು ಸಣ್ಣದಾಗಿ ಕಾಣುವಂತೆ ಮಾಡಿವೆ.’ ‘ಯುದ್ಧರಂಗದ ಸುತ್ತಲು ಇರುವ ಮರಗಳು, ತಗ್ಗುಗಳು ಮುಂತಾದವುಗಳಲ್ಲಿ ಸೇರಿ ಕೊಂಡು ಆಯುಧಗಳನ್ನು ಪ್ರಯೋಗಿಸುವ ಯೋಧರನ್ನು ಕೊಲ್ಲಲು ಚಕ್ರ, ಶಕ್ತಿ, ಋಷ್ಟಿ, ಮುದ್ಗರ ಎಂಬ ಆಯುಧಗಳನ್ನು ಯುದ್ಧರಂಗದಲ್ಲಿರುವ ಸೈನಿಕರು ಪ್ರಯೋಗಿಸಿದ್ದಾರೆ. ಆ ಆಯುಧಗಳು ಮರಗಳು ಮತ್ತು ತಗ್ಗುಗಳಿಗೆ ಹೋಗಿ ಸಿಕ್ಕಿ ಹಾಕಿಕೊಳ್ಳುತ್ತಿದ್ದವು. ಯುದ್ಧರಂಗದಲ್ಲಿ ಬಾಣಪ್ರಯೋಗ ಎಷ್ಟು ನಿರಂತರವಾಗಿ ನಡೆಯುತ್ತಿತ್ತೆಂದರೆ ಉಣ್ಣೆಯ ದಾರಗಳನ್ನು ರಂಧ್ರವಿಲ್ಲದ ರೀತಿಯಲ್ಲಿ ನೇಯ್ಗೆಮಾಡಿದಂತೆ ಬಾಣಗಳು ಕಾಣುತ್ತಿದ್ದವು. ಯೋಧರೆಂಬ ಪರ್ವತಮೇಖಲೆಗಳಿಗೆ ಪರ್ವತದ ತಪ್ಪಲುಪ್ರದೇಶಗಳಿಗೆ ಆ ಉಣ್ಣೆಯ ಪಟ್ಟಿ ಸುತ್ತಿಕೊಂಡಿರುವಂತೆ ಕಾಣುತ್ತಿತ್ತು.’ ‘‘ಮೋಡಗಳಷ್ಟು ಎತ್ತರಕ್ಕಿರುವ ಪತಾಕೆಗಳ ಬಟ್ಟೆಗಳು
ಮತ್ತು ಚಾಮರಗಳು ಆಕಾಶದಲ್ಲಿ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಂಡ ಮಿಂಚು ಮತ್ತು ಬಿರುಗಾಳಿಗಳಿಗೆ ಛಿನ್ನವಾಗಿ ಹೋಗುತ್ತಿದ್ದವು. ಕಲ್ಲುಗಳು ಮತ್ತು ಚಕ್ರಗಳನ್ನು ಎಸೆಯಲು ಕ್ಷೇಪಣ ಎಂಬ ಯಂತ್ರಗಳನ್ನು ಸ್ಥಾಪಿಸಲಾಗಿತ್ತು. ಆ ಯಂತ್ರಗಳಿಂದ ಎಸೆಯಲ್ಪಟ್ಟ ಕಲ್ಲುಗಳು ಮತ್ತು ಚಕ್ರಗಳ ಸಮೂಹಗಳಿಂದ ಆಕಾಶದಲ್ಲಿ ಹಾರಾಡುವ ಪಕ್ಷಿಗಳು ಭಯಭೀತರಾಗಿ ಆ ಯುದ್ಧರಂಗದಿಂದ ದೂರ ಓಡಿಹೋಗಿದ್ದವು.’ ‘‘ಅಲ್ಲಲ್ಲಿ ಆಯುಧಗಳಿಂದ ಕತ್ತರಿಸಲ್ಪಟ್ಟ ಅವಯವಗಳುಳ್ಳ ಯೋಧರು ನೆಲದಲ್ಲಿ ಬಿದ್ದು ಮರಣದ ಸ್ಥಿತಿಯಲ್ಲಿ ಒದ್ದಾಡಿಕೊಳ್ಳುತ್ತಾ ಆಕ್ರಂದನ ಮಾಡುತ್ತಿರುವ ದೃಶ್ಯ ಅತ್ಯಂತ ಭೀಕರವಾಗಿ ಕಾಣುತ್ತಿತ್ತು. ಕುಠಾರಗಳ ಆಘಾತಗಳು ತುಂಬಕಡೆ ಆಗಿದ್ದರಿಂದ ತಲೆಗಳು ಸೀಳಿ ಭೂಮಿಗೆ ಬಿಳುತ್ತಿದ್ದವು.’
‘‘ಯುದ್ಧದ ಭರದಲ್ಲಿ ಖಡ್ಗದ ತುಂಡುಗಳು ಆಕಾಶದಲ್ಲಿ ಹಾರಿಹೋಗುತ್ತಿದ್ದವು. ಹೊಳೆಯುತ್ತಾ ಹಾರಿ ಹೋಗುತ್ತಿರುವ ಅವುಗಳನ್ನು ನೋಡಿದರೆ ಆಕಾಶದಲ್ಲಿ ನಕ್ಷತ್ರಗಳು ಮಿನುಗುತ್ತಿರುವಂತೆ ಕಾಣುತ್ತಿತ್ತು. ಅತ್ಯಂತ ಬಲವಾಗಿ ಪ್ರಯೋಗಿಸಲ್ಪಟ್ಟ ಶಕ್ತಿ ಎಂಬ ಆಯುಧಗಳು ಆನೆಗಳನ್ನು ಸೀಳಿಹಾಕುತ್ತಿದ್ದವು. ಹೀಗೆ ಸೀಳಲ್ಪಟ್ಟು ಬೀಳುತ್ತಿರುವ ಆನೆಗಳಿಂದ ಭೂಮಿಯು ಆವರಿಸಲ್ಪಟ್ಟಿತ್ತು.’