ತಲಸ್ಪರ್ಶಿ ಆಡಳಿತ, ಜನಸ್ಪರ್ಶಿ ಯೋಜನೆಗಳ ಮೂಲಕ ಹೊಸತನದ ಸ್ಪರ್ಶ ನೀಡಿ, ರಾಜ್ಯದ ಆಮೂಲಾಗ್ರ ಸುಧಾರಣೆ ಉದ್ದೇಶವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾರಿದ್ದಾರೆ. ಸರ್ಕಾರ ರಚನೆಯಾದ ಬಳಿಕ ಆರ್ಥಿಕ ಇತಿಮಿತಿಗಳ ನಡುವೆಯೂ ಹೊಸ ಯೋಜನೆ ಘೋಷಣೆ, ಹಳೆ ಯೋಜನೆಗಳಲ್ಲಿ ಪರಿವರ್ತನೆ ಮಾಡಿ ನಾಡಿನ ಜನರಿಗೆ ವಿಶ್ವಾಸ ತುಂಬುವ ಕಸರತ್ತು ಮಾಡಿದ್ದರು. ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಮತ್ತಷ್ಟು ಯೋಜನೆ ಪ್ರಕಟಿಸಿ ಆಶಾಭಾವನೆ ಹೆಚ್ಚಿಸಿದ್ದಾರೆ. ಒಂದೊಂದೇ ದೃಢವಾದ ಹೆಜ್ಜೆಯಿಡುತ್ತಿರುವ ಬೊಮ್ಮಾಯಿ, ಕೃತಿಯ ಮೂಲಕ ಅಪಸ್ವರ ಹತ್ತಿಕ್ಕಲು ಪ್ರಯತ್ನಿಸಿದ್ದಾರೆ. ಅಲ್ಲದೆ, ಸರ್ಕಾರ ಇನ್ನೂ ಟೇಕಾಫ್ ಆಗಿಲ್ಲ, ಅಲ್ಪಾಯುಷಿ ಎನ್ನುವ ಟೀಕೆಗಳಿಗೂ ದಿಟ್ಟವಾಗಿ ಉತ್ತರಿಸಿದ್ದಾರೆ. ಅಧಿಕಾರವಹಿಸಿಕೊಂಡ ದಿನವೇ ಆಡಳಿತಯಂತ್ರಾಂಗಕ್ಕೆ ಚಾಟಿ ಬೀಸಿದ್ದರು. ಮೊದಲ ಸಂಪುಟ ಸಭೆಯಲ್ಲಿ ರೈತರು, ದುರ್ಬಲರು, ಬಡವರಿಗೆ ನೆರವಾಗುವಂತಹ ಚಾರಿತ್ರಿಕ ನಿರ್ಣಯ ಕೈಗೊಂಡು ಗಮನಸೆಳೆದಿದ್ದರು. ಸಚಿವ ಸಂಪುಟ ವಿಸ್ತರಣೆ ಬಳಿಕ ನಡೆದ ಎರಡನೇ ಸಭೆಯಲ್ಲಿ ಪರಿಶಿಷ್ಟ ಪಂಗಡ ಕಲ್ಯಾಣ ಸಚಿವಾಲಯ, ಮಹಿಳೆಯರ ಸಬಲೀಕರಣ ಯೋಜನೆಗಳ ಮೇಲ್ವಿಚಾರಣೆಗೆ ಸಿಎಂ ನೇತೃತ್ವ ಸಮಿತಿ ರಚಿಸುವ ನಿರ್ಧಾರಕ್ಕೆ ಅಸ್ತು ಎಂದಿದ್ದಾರೆ. ಕರೊನಾ ವೈರಾಣು ಸೋಂಕು ಹತೋಟಿಗೆ ತುರ್ತು ಕ್ರಮಗಳು ಹಾಗೂ ಪ್ರವಾಹಪೀಡಿತ ಪ್ರದೇಶದ ವಸ್ತುಸ್ಥಿತಿ ಪರಿಶೀಲನೆ, ಪರಿಹಾರ ಚುರುಕುಗೊಳಿಸಲೆಂದು ಸಚಿವರಿಗೆ ಜವಾಬ್ದಾರಿ ಒಪ್ಪಿಸಿ ಆಯಾ ಜಿಲ್ಲೆಗೆ ಕಳುಹಿಸಿದರು. ಸ್ವತಃ ಪ್ರವಾಹ, ಅತಿವೃಷ್ಟಿಬಾಧಿತ ಹಾಗೂ ಕರೊನಾ ಹೆಚ್ಚಿರುವ ಜಿಲ್ಲೆಗಳಿಗೆ ಭೇಟಿಯಿತ್ತು ತಮ್ಮ ಇರಾದೆ ಏನೆಂಬುದನ್ನು ಸಚಿವ ಸಂಪುಟದ ಸಹೋದ್ಯೋಗಿಗಳು, ಅಧಿಕಾರಿ ವರ್ಗ, ಅತ್ತ ಪ್ರತಿಪಕ್ಷಗಳಿಗೆ ತೋರಿಸಿಕೊಟ್ಟಿದ್ದಾರೆ.
ಟೀಕೆ ಟಿಪ್ಪಣಿಗಳೇ ಆಶೀರ್ವಾದ: ನಾನು ಸಿಎಂ ಆದ ನಂತರ ಹಲವು ಅನುಮಾನ ಟೀಕೆ-ಟಿಪ್ಪಣಿ ಕೇಳಿದ್ದೇನೆ. ಅದನ್ನೆಲ್ಲಾ ಮೆಟ್ಟಿಲಾಗಿ ಮಾಡಿಕೊಂಡು ಯಶಸ್ವಿ ಆಡಳಿತದ ಮೂಲಕ ತಿರುಗೇಟು ನೀಡುತ್ತೇನೆ. ಪ್ರಾದೇಶಿಕ ಅಸಮತೋಲನ ತಪ್ಪಿಸಿ, ಸಮತೋಲನಕ್ಕೆ ತರುವ ಕೆಲಸ ಮಾಡುತ್ತೇವೆ. ಗಡಿ ಗ್ರಾಮಗಳನ್ನು ವಿಶೇಷ ಆದ್ಯತೆಯಾಗಿ ಪರಿಗಣಿಸಿ ಅಭಿವೃದ್ಧಿ ಮಾಡಲಾಗುವುದು. ರಾಜ್ಯದಲ್ಲಿ ಅಭಿವೃದ್ಧಿ ಪಥದತ್ತ ಸಾಗುವ ಬದಲಾವಣೆ ಕೆಲವೇ ತಿಂಗಳಲ್ಲಿ ಜನರ ಗಮನಕ್ಕೆ ಬರಲಿದೆ ಎಂದು ಬೊಮ್ಮಾಯಿ ತಿಳಿಸಿದರು.
ಶಾಲೆಗಳ ಅಭಿವೃದ್ಧಿ: 750 ಶಾಲೆಗಳಿಗೆ ಸುಸಜ್ಜಿತ ಕಟ್ಟಡ, ಪ್ರಯೋಗಾಲಯ ಸೇರಿ ಸಮಗ್ರ ಸೌಲಭ್ಯ ಒದಗಿಸಲು ತಲಾ 10 ಲಕ್ಷ ರೂ.ಗಳಂತೆ 75 ಕೋಟಿ ರೂ. ಅನುದಾನ. 750 ಅಂಗನವಾಡಿ ಕೇಂದ್ರಗಳ ಮೂಲಸೌಕರ್ಯ ಮೇಲ್ದರ್ಜೆಗೇರಿಸಲು ತಲಾ 1 ಲಕ್ಷ ರೂ.ನಂತೆ 7.5 ಕೋಟಿ ರೂ. ನೆರವು. 750 ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳನ್ನು ಗುರುತಿಸಿ ಸಾಮುದಾಯ ಸೇವೆಗೆ ಪ್ರೇರೇಪಿಸಲಾಗುವುದು. ರಾಜ್ಯದ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಸಮುದಾಯಗಳ 75 ಸಾವಿರ ಯುವಜನರಿಗೆ ಕೌಶಲ್ಯ ಅಭಿವೃದ್ಧಿಗೆ 2 ವರ್ಷಗಳ ತರಬೇತಿ ನೀಡಲು 112 ಕೋಟಿ ರೂ. ನೀಡುವುದಾಗಿ ಬೊಮ್ಮಾಯಿ ಘೋಷಿಸಿದ್ದಾರೆ.
ಕಚೇರಿಗೆ ಅಲೆದಾಟ ತಪ್ಪಿಸುವ ಗುರಿ: ರಾಜ್ಯದ ಅಭಿವೃದ್ಧಿ ಜನರ ಸುತ್ತಲೂ ಇರಬೇಕು. ಜನರು ವಾಸವಿರುವ ಸ್ಥಳಕ್ಕೆ ಅಭಿವೃದ್ಧಿ ತಲುಪಬೇಕು. ಸಕಾಲ ಯೋಜನೆಗೆ ಬಲ ನೀಡಿ ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರ ಅಲೆದಾಟ ತಪ್ಪಿಸ ಲಾಗುವುದು. ಪ್ರತಿಯೊಬ್ಬರ ಬದುಕು ಹಸನು ಮಾಡುವ ಯೋಜನೆ ರೂಪಿಸುತ್ತಿದ್ದು, ಸುಖ- ಶಾಂತಿಯ ಜೀವನ ಕಲ್ಪಿಸಲಾಗುತ್ತದೆ. ಸರ್ಕಾರಕ್ಕೆ ಆಡಳಿತಾವಧಿ 20 ತಿಂಗಳು ಮಾತ್ರ ಇದ್ದು, ಅನುಕೂಲಕರ ಯೋಜನೆ ಜಾರಿಗೆ ತರಲಾಗುವುದು. ಸ್ವಾತಂತ್ರ್ಯ ಶತಮಾನೋತ್ಸವ ವೇಳೆಗೆ ರಾಜ್ಯ ಜಾಗತಿಕ ಮುಂಚೂಣಿ ಯಲ್ಲಿರುವಂತೆ ಯೋಜನೆ ರೂಪಿಸಲಾಗುತ್ತದೆ ಎಂದು ಬೊಮ್ಮಾಯಿ ಹೇಳಿದರು.
ಶಾಲೆಗಳ ಅಭಿವೃದ್ಧಿ: 750 ಶಾಲೆಗಳಿಗೆ ಸುಸಜ್ಜಿತ ಕಟ್ಟಡ, ಪ್ರಯೋಗಾಲಯ ಸೇರಿ ಸಮಗ್ರ ಸೌಲಭ್ಯ ಒದಗಿಸಲು ತಲಾ 10 ಲಕ್ಷ ರೂ.ಗಳಂತೆ 75 ಕೋಟಿ ರೂ. ಅನುದಾನ. 750 ಅಂಗನವಾಡಿ ಕೇಂದ್ರಗಳ ಮೂಲಸೌಕರ್ಯ ಮೇಲ್ದರ್ಜೆಗೇರಿಸಲು ತಲಾ 1 ಲಕ್ಷ ರೂ.ನಂತೆ 7.5 ಕೋಟಿ ರೂ. ನೆರವು. 750 ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳನ್ನು ಗುರುತಿಸಿ ಸಾಮುದಾಯ ಸೇವೆಗೆ ಪ್ರೇರೇಪಿಸಲಾಗುವುದು. ರಾಜ್ಯದ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಸಮುದಾಯಗಳ 75 ಸಾವಿರ ಯುವಜನರಿಗೆ ಕೌಶಲ್ಯ ಅಭಿವೃದ್ಧಿಗೆ 2 ವರ್ಷಗಳ ತರಬೇತಿ ನೀಡಲು 112 ಕೋಟಿ ರೂ. ನೀಡುವುದಾಗಿ ಬೊಮ್ಮಾಯಿ ಘೋಷಿಸಿದ್ದಾರೆ.
ಪ್ಯಾರಿಸ್ಗೆ 75 ಕ್ರೀಡಾಪಟುಗಳು: ಮುಂಬರುವ ಪ್ಯಾರೀಸ್ ಒಲಂಪಿಕ್ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಹಾಗೂ ಪದಕ ವಿಜೇತ ಸಾಮರ್ಥ್ಯವುಳ್ಳ 75 ಕ್ರೀಡಾಪಟುಗಳನ್ನು ರೂಪಿಸಲು ಅಗತ್ಯ ತರಬೇತಿ ಮತ್ತು ಪೋ›ತ್ಸಾಹ ನೀಡಲು ಅಮೃತ ಕ್ರೀಡಾ ದತ್ತು ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ.
ನವಕರ್ನಾಟಕ ನಿರ್ಮಾಣ ಆರಂಭ: ಸ್ವಾತಂತ್ರಭಾರತದ ಅಮೃತ ಮಹೋತ್ಸವ ದಿನದಿಂದ ನವ ಕರ್ನಾಟಕ ಆರಂಭವಾಗುತ್ತಿದೆ. ಹೊಸ ಚಿಂತನೆ, ದಿಕ್ಸೂಚಿಯೊಂದಿಗೆ ಮಾನವ ಮತ್ತು ನೈಸರ್ಗಿಕ ಸಂಪನ್ಮೂಲ ಬಳಸಿಕೊಂಡು, ಆಧುನಿಕ ತಂತ್ರಜ್ಞಾನದೊಂದಿಗೆ ವೈಜ್ಞಾನಿಕ ಕೃಷಿ ಮತ್ತು ಸೇವಾವಲಯ ಅಭಿವೃದ್ಧಿ ಮಾಡಲಾಗುವುದು. ಇನ್ವೆಸ್ಟ್ ಕರ್ನಾಟಕ ಆಯೋಜಿಸಿ, ವಿದೇಶದಿಂದ ಹೆಚ್ಚಿನ ಬಂಡವಾಳ ಹರಿದು ಬರುವಂತೆ ಮಾಡಿ, ಕೈಗಾರಿಕೆಗಳು, ಕಂಪನಿ ಸ್ಥಾಪನೆಯೊಂದಿಗೆ ಯುವಜನತೆಗೆ ಹೆಚ್ಚು ಉದ್ಯೋಗ ಕಲ್ಪಿಸಲಾಗುವುದು ಎಂದು ಬೊಮ್ಮಾಯಿ ಭರವಸೆ ನೀಡಿದರು.
ಕೋವಿಡ್ ನಿಯಮ ಪಾಲಿಸಲು ಮನವಿ: ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಕಾಣಿಸಿಕೊಂಡ ಕೋವಿಡ್ ನಿಯಂತ್ರಣಕ್ಕೆ ಸಾಕಷ್ಟು ಶ್ರಮಿಸಿದೆ. ಹಿಂದಿನ ಸಿಎಂ ಯಡಿಯೂರಪ್ಪ ಕರೊನಾ ನಿರ್ವಹಣೆಗೆ ಅಧಿಕ ಕೊಡುಗೆ ನೀಡಿದ್ದಾರೆ. ಮುಂದಿನ ದಿನಗಳಲ್ಲೂ ಸರ್ಕಾರ ಕೋವಿಡ್ ನಿಮೂಲನೆಗೆ ಅಗತ್ಯವಾದ ತಂತ್ರಜ್ಞಾನ ಮತ್ತು ಔಷಧೋಪಚಾರ ಒದಗಿಸುತ್ತದೆ. ಜತೆಗೆ, ಎಲ್ಲ ಸಾರ್ವಜನಿಕರು ಎಲ್ಲೆಡೆ ಮಾಸ್ಕ್, ವ್ಯಕ್ತಿಗತ ಅಂತರ ಮತ್ತು ಸ್ವಚ್ಛತೆ ಕಾಪಾಡುವ ಮೂಲಕ ಸೋಂಕು ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಸಿಎಂ ಮನವಿ ಮಾಡಿದರು.
ದಾವಣಗೆರೆ: ದೇಶದ ಸ್ವಾತಂತ್ರ್ಯ್ಕಾಗಿ ಹೋರಾಡಿ ಹುತಾತ್ಮರಾದ ಭಗತ್ಸಿಂಗ್ ಭಾವಚಿತ್ರವನ್ನು 39 ಸಾವಿರ ಶರ್ಟ್ ಗುಂಡಿಗಳಲ್ಲಿ ರಚಿಸುವ ಮೂಲಕ ನಗರದ ವಿದ್ಯಾರ್ಥಿ ಪ್ರದೀಪ್ ಅಭಿಮಾನ ಮೆರೆದಿದ್ದಾರೆ. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಕಾಂ ಅಂತಿಮ ವರ್ಷದಲ್ಲಿ ಓದುತ್ತಿರುವ ಪ್ರದೀಪ್, ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಈ ಕಲಾಕೃತಿಯನ್ನು ರಚಿಸಿದ್ದಾರೆ. ತಮ್ಮ ಕಾಲೇಜು ಆವರಣದಲ್ಲಿ ಪ್ಲೈವುಡ್ ಶೀಟ್ ಮೇಲೆ ಕಪ್ಪು, ಕೆಂಪು, ಬಿಳಿ, ಹಸಿರು ಮತ್ತು ನೀಲಿ ಬಣ್ಣದ ಗುಂಡಿಗಳನ್ನು ಜೋಡಿಸಿ ಭಗತ್ಸಿಂಗ್ ಅವರ ಭಾವಚಿತ್ರ ರಚಿಸಿದ್ದಾರೆ. ಅದು 6 ಅಡಿ ಅಗಲ, 8 ಅಡಿ ಉದ್ದವಿದೆ. ಇದರ ಹಿನ್ನೆಲೆಯಾದ ರಾಷ್ಟ್ರಧ್ವಜ ಚಿತ್ರಕ್ಕೆ 15 ಕೆಜಿ ರಂಗೋಲಿಯನ್ನು ತುಂಬಿದ್ದಾರೆ. ಈ ವಿನೂತನ ಕಲಾಕೃತಿಯನ್ನು ಅವರು 4 ದಿನದಲ್ಲಿ ರಚಿಸಿದ್ದಾರೆ.