ನ್ಯೂಸ್

ಕರೊನಾ ಸಂಕಷ್ಟದಲ್ಲಿ ಮಹತ್ವದ ಆದೇಶ: ಎಲ್ಲ ವಿದ್ಯಾರ್ಥಿಗಳಿಗೂ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ, ಪ್ರತಿ ಕುಟುಂಬಕ್ಕೆ 4 ಸಾವಿರ ಹಣ

ಚೆನ್ನೈ: ಕರೊನಾ ಸಂಕಷ್ಟಕಾಲದಲ್ಲಿ ನಲುಗಿರುವ ರಾಜ್ಯದ ಜನತೆ ತಮಿಳುನಾಡು ನೂತನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಬಂಪರ್​ ಕೊಡುಗೆ ಘೋಷಿಸಿದ್ದಾರೆ.

ಎಲ್ಲ ಖಾಸಗಿ ಆಸ್ಪತ್ರೆಗಳಲ್ಲೂ ರಾಜ್ಯದ ವಿದ್ಯಾರ್ಥಿಗಳಿಗೆ ಕರೊನಾಗೆ ಉಚಿತ ಚಿಕಿತ್ಸೆ ಕೊಡುವುದಾಗಿ ಸ್ಟಾಲಿನ್​ ಹೇಳಿದ್ದಾರೆ. ಫ್ಯಾಮಿಲಿ ಕಾರ್ಡ್ (ಪಡಿತರ ಕಾರ್ಡ್) ಹೊಂದಿರುವ ಕುಟುಂಬಗಳಿಗೆ ಪ್ರತಿ ವರ್ಷ ರಾಜ್ಯ ಸರ್ಕಾರ 4 ಸಾವಿರ ರೂಪಾಯಿ ಸಹಾಯಧನ ನೀಡಲಿದೆ. ಉನ್ನತ ಶಿಕ್ಷಣ ವಿದ್ಯಾಭ್ಯಾಸ ಮಾಡುತ್ತಿರುವ ಮತ್ತು ಉದ್ಯೋಗಸ್ಥ ಮಹಿಳೆಯರಿಗೆ ಸಾಮಾನ್ಯ ಸಾರಿಗೆ ಬಸ್​ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ. ಗ್ರಾಹಕರ ಅನುಕೂಲಕ್ಕಾಗಿ ಹಾಲಿನ ಖರೀದಿದರವನ್ನು ಲೀಟರ್​ಗೆ 3 ರೂಪಾಯಿ ಇಳಿಸಲಾಗಿದೆ. ಮುಖ್ಯಮಂತ್ರಿ ಆರೋಗ್ಯ ವಿಮೆ ಯೋಜನೆಯನ್ನ ಖಾಸಗಿ ಆಸ್ಪತ್ರೆಗಳಿಗೂ ವಿಸ್ತರಿಸಲಾಗಿದ್ದು, ಕರೊನಾ ಸೋಂಕಿತರು ಈ ಯೋಜನೆಯಡಿ ಚಿಕಿತ್ಸೆ ಪಡೆಯಬಹುದು ಎಂದು ಸ್ಟಾಲಿನ್​ ಘೋಷಿಸಿದ್ದಾರೆ.

ಇಂದು(ಶುಕ್ರವಾರ) ಬೆಳಗ್ಗೆ ಡಿಎಂಕೆ(ದ್ರಾವಿಡ ಮುನ್ನೇತ್ರ ಕಳಗಂ) ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಚೆನ್ನೈನ ರಾಜಭವನದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಇದರ ಬೆನ್ನಲ್ಲೇ ರಾಜ್ಯದ ಜನತೆಗಾಗಿ ಹಲವು ಪ್ರಮುಖ ಯೋಜನೆಗಳನ್ನ ಘೋಷಿಸಿದ್ದಾರೆ.