ನ್ಯೂಸ್

ಯಾರ ಗಮನಕ್ಕೂ ಬಾರದಂತೆ ಹಣ ತುಂಬಿದ ಬ್ಯಾಗ್​ ಕದ್ದ ಕಳ್ಳ: ಖದೀಮನ ಕೈಚಳಕದ ವಿಡಿಯೋ ವೈರಲ್​...| Bank

Bank : ಮಧ್ಯಪ್ರದೇಶದ ಬೇತುಲ್​ ಜಿಲ್ಲೆಯ ಬ್ಯಾಂಕ್​ವೊಂದರಲ್ಲಿ ದುಷ್ಕರ್ಮಿಯೊಬ್ಬ ಗ್ರಾಹಕರ ಗಮನಕ್ಕೆ ಬಾರದಂತೆ ಹಣ ತುಂಬಿದ ಬ್ಯಾಗ್​ನ್ನು ಕದ್ದೊಯ್ಯುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​ ಆಗಿದೆ.

ವಿಡಿಯೋದಲ್ಲೇನಿದೆ?

ವೀಡಿಯೋದಲ್ಲಿ ನೀಲಿ ಬಣ್ಣದ ಶರ್ಟ್​ ಮತ್ತು ಕಪ್ಪು ಬಣ್ಣದ ಪ್ಯಾಂಟ್​ ಧರಿಸಿದ್ದ ಯುವಕನೊಬ್ಬ ಹಣ ತುಂಬಿದ ಬ್ಯಾಗ್​ ಮೇಜಿನ ಕೆಳಗೆ ಇರುವುದನ್ನು ಗಮನಿಸುತ್ತಿದ್ದಾನೆ. ನಂತರ, ಯಾರೂ ಇಲ್ಲವೆಂದು ಖಚಿತಪಡಿಸಿಕೊಂಡ ಆತ ನಿಧಾನಕ್ಕೆ ಅಲ್ಲೇ ಸುತ್ತುವರಿದಿದ್ದಾನೆ. ಪಕ್ಕದಲ್ಲಿರುವ ಗ್ರಾಹಕರು ನಿದ್ದೆಗೆ ಜಾರಿದ್ದು, ಈ ವೇಳೆ ಅಲ್ಲಿರುವ ಬ್ಯಾಗ್​ ತೆಗೆದುಕೊಂಡು ಪರಾರಿಯಾಗಿರುವ ದೃಶ್ಯವನ್ನು ವಿಡಿಯೋ ತೋರಿಸುತ್ತಿದೆ.

ವಿಷಯ ತಿಳಿದ ಕೂಡಲೇ ಬ್ಯಾಂಕ್​ ಸಿಬ್ಬಂದಿಗಳು ಪೊಲೀಸರಿಗೆ ದೂರು ನೀಡಿದ್ದು, ದರೋಡೆಕೋರನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇನ್ನು ಸಿಸಿಟಿವಿ ದೃಶ್ಯಾವಳಿಗಳನ್ನು ಸಾಕ್ಷಿಯಾಗಿ ಸಲ್ಲಿಸಲಾಗಿದ್ದು, ಆರೋಪಿಯ ಹಿಂದೆ ಯಾರಿರಬಹುದು ಎಂದು ಗುರುತಿಸುವ ಪ್ರಯತ್ನಗಳನ್ನು ಪೊಲೀಸ್​ ಅಧಿಕಾರಿಗಳು ಮಾಡಿದ್ದಾರೆ.

ಇದೇ ರೀತಿ ರಾಜ್ಯದಲ್ಲಿ ದರೋಡೆ ಕೇಸುಗಳು ಹೆಚ್ಚುತ್ತಿದ್ದು, ಆಗಸ್ಟ್ ತಿಂಗಳಲ್ಲಿ, ಮಧ್ಯಪ್ರದೇಶದ ಜಬಲ್ಪುರದಲ್ಲಿ ಖಾಸಗಿ ಹಣಕಾಸು ಬ್ಯಾಂಕಿನಲ್ಲಿ ದುಷ್ಕರ್ಮಿಗಳ ಗುಂಪೊಂದು ದರೋಡೆ ನಡೆಸಿ 14 ಕೆಜಿ ಚಿನ್ನ ಮತ್ತು 5 ಲಕ್ಷ ರೂ. ನಗದನ್ನು ದೋಚಿಕೊಂಡು ಹೋಗಿರುವುದು ಬೆಳಕಿಗೆ ಬಂದಿತ್ತು.

ಆರೋಪಿಗಳು ಹಗಲು ಹೊತ್ತಿನಲ್ಲಿಯೇ ಬ್ಯಾಂಕ್​ಗೆ ನುಗ್ಗಿ ಬಂದೂಕು ತೋರಿಸಿ ದರೋಡೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಇದಾದ ಬಳಿಕ ಆರೋಪಿಗಳನ್ನು ಪೊಲೀಸರು ಬಂಧಿಸಿರುವುದಾಗಿ ತಿಳಿದುಬಂದಿದೆ. (ಏಜೆನ್ಸೀಸ್)