ಹೊಟ್ಟೆಯಲ್ಲೇ ಮರಿ ಬೆಳೆಸಿ ಬಾಯಿಂದ ಹೊರಹಾಕುತ್ತಿದ್ದ ಅಪರೂಪದ ಕಪ್ಪೆ 
ನ್ಯೂಸ್

ಬಾಯಿಯ ಮೂಲಕವೇ ಮರಿಗಳಿಗೆ ಜನ್ಮ ನೀಡುತ್ತಿದ್ದ ವಿಚಿತ್ರ ಕಪ್ಪೆ! ಪ್ರಕೃತಿಯ ಈ ವಿಸ್ಮಯದ ಬಗ್ಗೆ ಗೊತ್ತಾ? | Gastric brooding frog

Extinct Frog Species Australia: ಪ್ರಕೃತಿಯ ಲೋಕವೇ ವಿಸ್ಮಯಗಳ ಕಣಜ. ಅದಕ್ಕೆ ತಕ್ಕ ಉದಾಹರಣೆಯೆಂದರೆ ಆಸ್ಟ್ರೇಲಿಯಾದಲ್ಲಿ ಕಂಡುಬರುತ್ತಿದ್ದ 'ಗ್ಯಾಸ್ಟ್ರಿಕ್-ಬ್ರೂಡಿಂಗ್ ಕಪ್ಪೆ'. ಸಾಮಾನ್ಯವಾಗಿ ಎಲ್ಲ ಕಪ್ಪೆಗಳಂತೆ ನೀರಲ್ಲಿ ಮೊಟ್ಟೆಯಿಟ್ಟು ಮರಿ ಮಾಡದ ಈ ಕಪ್ಪೆ, ತನ್ನ ವಿಭಿನ್ನ ಸಂತಾನೋತ್ಪತ್ತಿ ವಿಧಾನದಿಂದ ಇಡೀ ವಿಜ್ಞಾನ ಲೋಕವನ್ನೇ ಬೆರಗುಗೊಳಿಸಿತ್ತು.

ಈ ಕಪ್ಪೆಯ ಜೀವನ ಚಕ್ರ ನಿಜಕ್ಕೂ ವಿಚಿತ್ರವಾಗಿತ್ತು. ಹೆಣ್ಣು ಕಪ್ಪೆ ಇಟ್ಟ 20 ರಿಂದ 25 ದೊಡ್ಡ ಮೊಟ್ಟೆಗಳನ್ನು ಗಂಡು ಕಪ್ಪೆ ನಿಷೇಚನಗೊಳಿಸಿದ (Fertilize) ತಕ್ಷಣ, ಹೆಣ್ಣು ಕಪ್ಪೆ ಆ ಎಲ್ಲಾ ಮೊಟ್ಟೆಗಳನ್ನು ತನ್ನ ಬಾಯಿಯ ಮೂಲಕವೇ ನುಂಗಿಬಿಡುತ್ತಿತ್ತು.

ಬಾಯಿಯಲ್ಲೇ ಮರಿಗಳ ಜನನ

ತಾಯಿ ಕಪ್ಪೆ ನುಂಗಿದ ಮೊಟ್ಟೆಗಳು ನೇರವಾಗಿ ಅದರ ಜಠರವನ್ನು ಸೇರುತ್ತಿದ್ದವು. ಮುಂದಿನ 6 ರಿಂದ 7 ವಾರಗಳವರೆಗೆ ಆ ಕಪ್ಪೆಯ ಇಡೀ ಹೊಟ್ಟೆಯೇ ಗರ್ಭಾಶಯವಾಗಿ ಬದಲಾಗಿ, ಮೊಟ್ಟೆಗಳು ಮರಿಗಳಾಗಿ ಬೆಳೆಯುತ್ತಿದ್ದವು. ಮರಿಗಳು ಸಂಪೂರ್ಣವಾಗಿ ರೂಪುಗೊಂಡ ಬಳಿಕ ತಾಯಿಯ ಬಾಯಿಯ ಮೂಲಕವೇ ಹೊರಬರುತ್ತಿದ್ದವು.

ಕಪ್ಪೆಯ ಬಾಯಿ ಮೂಲಕ ಮರಿಗಳ ಜನನ

ಹೊಟ್ಟೆಯಲ್ಲಿ ಆಸಿಡ್ ಉತ್ಪತ್ತಿ ಬಂದ್

ಯಾವುದೇ ಆಹಾರ ಹೊಟ್ಟೆ ಸೇರಿದರೂ ಆಮ್ಲ ಬಿಡುಗಡೆಯಾಗುವುದು ಸಹಜ. ಆದರೆ ಈ ಕಪ್ಪೆ ಮೊಟ್ಟೆಗಳನ್ನು ನುಂಗಿದಾಗ ಬಿಡುಗಡೆಯಾಗುವ 'ಪಿಜಿಇ2' (PGE2) ರಾಸಾಯನಿಕವು ಜೀರ್ಣಕಾರಿ ಆಸಿಡ್ ಉತ್ಪತ್ತಿಯಾಗದಂತೆ ತಡೆಯುತ್ತಿತ್ತು. ಇದರಿಂದ ಮೊಟ್ಟೆಗಳು ಸುರಕ್ಷಿತವಾಗಿದ್ದು, ಈ ಅಂಶವು ಮಾನವರಲ್ಲಿ ಗ್ಯಾಸ್ಟ್ರಿಕ್ ಅಲ್ಸರ್‌ಗೆ ಮದ್ದು ಹುಡುಕಲು ವಿಜ್ಞಾನಿಗಳಿಗೆ ಆಶಾಕಿರಣವಾಗಿತ್ತು.

ಉಪವಾಸ ಮತ್ತು ಬದುಕಿನ ಹೋರಾಟ

ಮರಿಗಳು ಹೊಟ್ಟೆಯಲ್ಲಿದ್ದ 6 ರಿಂದ 7 ವಾರಗಳವರೆಗೆ ತಾಯಿ ಕಪ್ಪೆ ಏನನ್ನೂ ತಿನ್ನದೆ ಸಂಪೂರ್ಣ ಉಪವಾಸವಿರುತ್ತಿತ್ತು. ಹೊಟ್ಟೆಯಲ್ಲಿ ಮರಿಗಳು ಬೆಳೆಯುತ್ತಾ ಹೋದಂತೆ ಜಠರ ದೊಡ್ಡದಾಗಿ ಶ್ವಾಸಕೋಶವೇ ಕುಸಿಯುತ್ತಿತ್ತು. ಆಗ ಕಪ್ಪೆಯು ಬಾಯಿಯ ಬದಲಿಗೆ ತನ್ನ ಚರ್ಮದ ಮೂಲಕವೇ ಉಸಿರಾಡಬೇಕಾದ ಅನಿವಾರ್ಯತೆ ಇತ್ತು.

ಮರಿಗಳು ಹೊಟ್ಟೆಯಲ್ಲಿದ್ದ 6 ರಿಂದ 7 ವಾರಗಳವರೆಗೆ ತಾಯಿ ಕಪ್ಪೆ ಉಪವಾಸ

ಇದನ್ನೂ ಓದಿ: ಆಟಿಕೆಗಳಂತೆ ಸಮುದ್ರಕ್ಕೆ ಕೊಚ್ಚಿಹೋದ ಕಾರುಗಳು: ಮೆಕ್ಸಿಕೋದಲ್ಲಿ 'ವ್ಯಾನ್ಸ್' ಅಬ್ಬರ | Mexico Floods

ಗ್ಯಾಸ್ಟ್ರಿಕ್-ಬ್ರೂಡಿಂಗ್ ಕಪ್ಪೆಗಳ ದುರದೃಷ್ಟಕರ ಅಳಿವು

ಶಿಲೀಂಧ್ರ ಬಾಧೆ ಮತ್ತು ಮಾನವರ ಹಸ್ತಕ್ಷೇಪದಿಂದಾಗಿ ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್ ಕಾಡುಗಳಲ್ಲಿದ್ದ ಈ ಕಪ್ಪೆಗಳು 1980ರ ದಶಕದಲ್ಲೇ ಕಣ್ಮರೆಯಾದವು. ಆದರೆ ವಿಜ್ಞಾನಿಗಳು ಈಗ ಕ್ಲೋನಿಂಗ್ ತಂತ್ರಜ್ಞಾನದ ಬಳಕೆಯಿಂದ (Project Lazarus) ಈ ವಿಶಿಷ್ಟ ಜೀವಿಯನ್ನು ಮರುಸೃಷ್ಟಿಸಲು ನಿರಂತರ ಪ್ರಯತ್ನಗಳನ್ನು ಮುಂದುವರಿಸಿದ್ದಾರೆ.