ನ್ಯೂಸ್

ಆರ್ಥಿಕ ಬಿಕ್ಕಟ್ಟಿಂದ ಕಂಗೆಟ್ಟ ಶ್ರೀಲಂಕಾ: ಅಕ್ರಮವಾಗಿ ಭಾರತಕ್ಕೆ ನುಸುಳುವ ಸಾಧ್ಯತೆ, ಕಟ್ಟೆಚ್ಚರ ವಹಿಸಲು ಮನವಿ

ಮಂಗಳೂರು: ಶ್ರೀಲಂಕಾ ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗಿದ್ದು, ಒಂದೊತ್ತಿನ ಊಟಕ್ಕೂ ಜನ ಪರದಾಡುತ್ತಿದ್ದಾರೆ. ದೇಶದಲ್ಲಿ ಅರಾಜಕತೆ ಉಂಟಾಗಿದ್ದು, ಆಹಾರ ಪದಾರ್ಥಗಳಿಗಾಗಿ ದೊಂಬಿ-ಕಲಹ ಹೆಚ್ಚಾಗಿದೆ. ಅಲ್ಲಿನ ಆರ್ಥಿಕ ಬಿಕ್ಕಟ್ಟಿಂದ ಕಂಗೆಟ್ಟ ಜನ ಸಮುದ್ರ ಮುಖೇನ ಹಾಗೂ ಇನ್ನಿತರ ಮಾರ್ಗಗಳ ಮುಖಾಂತರ ಭಾರತಕ್ಕೆ ಅಕ್ರಮವಾಗಿ ನುಸುಳುವ ಸಾಧ್ಯತೆ ಇದೆ. ಹಾಗಾಗಿ ಕಟ್ಟೆಚ್ಚರ ವಹಿಸುವಂತೆ ಸ್ಥಳೀಯರಿಗೆ ಮಂಗಳೂರಿನ ಕರಾವಳಿ ಕಾವಲು ಪೊಲೀಸ್​ ಠಾಣೆ ಪ್ರಕಟಣೆ ಹೊರಡಿಸಿದೆ.

ಅಪರಿಚಿತ ವ್ಯಕ್ತಿಗಳಿಗೆ ಮನೆಯನ್ನು ಬಾಡಿಗೆಗೆ ನೀಡಬೇಡಿ. ಬಾಡಿಗೆ ನೀಡುವಾಗ ಅವರ ಪೂರ್ವಪರವನ್ನು ಸರಿಯಾಗಿ ತಿಳಿದುಕೊಳ್ಳಿ. ಅಲ್ಲದೆ ಸೂಕ್ತ ದಾಖಲಾತಿಗಳನ್ನು ಪಡೆದು ಕೂಡಲೇ ಪೊಲೀಸ್​ ಠಾಣೆಗೆ ಮಾಹಿತಿ ನೀಡಬೇಕು ಎಂದು ಕರಾವಳಿ ಕಾವಲು ಪೊಲೀಸ್​ ಠಾಣೆಯ ನಿರೀಕ್ಷಕರು ಮನವಿ ಮಾಡಿದ್ದಾರೆ.

ಚೆನ್ನೈ ಮೂಲಕ ಮಂಗಳೂರಿಗೆ ಬಂದು ಅಕ್ರಮವಾಗಿ ವಾಸವಿದ್ದ ಶ್ರೀಲಂಕಾದ 12 ಪ್ರಜೆಗಳನ್ನು 2021ರ ಜೂನ್​​ನಲ್ಲಿ ಪತ್ತೆ ಹಚ್ಚಿ ತನಿಖೆಯನ್ನು ಎನ್​ಐಗೆ ವಹಿಸಲಾಗಿತ್ತು.