ಸಹರಾನ್‌ಪುರ: ಹರಿದ್ವಾರಕ್ಕೆ ತೆರಳುತ್ತಿದ್ದ ಒಂದೇ ಕುಟುಂಬದ ಕಾರಿಗೆ ವೇಗವಾಗಿ ಬಂದ ಬೊಲೆರೊ ಎಸ್‌ಯುವಿ ಹಿಂಬದಿಯಿಂದ ಡಿಕ್ಕಿ(Road Accident) ಹೊಡೆದ ಪರಿಣಾಮ ನಾಲ್ವರು ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆಯ ರಾಮ್‌ಪುರ ಮನಿಹಾರನ್ ಪ್ರದೇಶದಲ್ಲಿ ಶುಕ್ರವಾರ ನಡೆದಿದೆ. ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಸಿಸಿಟಿವಿಯಲ್ಲಿ ಸೆರೆಯಾದ ಭೀಕರ ದೃಶ್ಯ
ಡೆಹ್ರಾಡೂನ್-ಪಂಚಕುಲಾ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಸಿಸಿಟಿವಿ ದೃಶ್ಯಗಳ ಪ್ರಕಾರ, ಟಾಟಾ ಟಿಯಾಗೋ ಕಾರು ಹೆದ್ದಾರಿಯಲ್ಲಿ ರಿವರ್ಸ್ ತೆಗೆದುಕೊಳ್ಳುತ್ತಿದ್ದ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಬೊಲೆರೊ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಮೊದಲು ರಸ್ತೆ ವಿಭಜಕಕ್ಕೆ ಅಪ್ಪಳಿಸಿ, ಬಳಿಕ ರಸ್ತೆಯ ಇನ್ನೊಂದು ಬದಿಯ ಡಿವೈಡರ್‌ಗೆ ಬಡಿದಿದೆ. ಇದರಿಂದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಡಿಕ್ಕಿಯ ಹೊಡೆತಕ್ಕೆ ಬೊಲೆರೊ ಕೂಡ ಪಲ್ಟಿಯಾಗಿದೆ.
ನಾಲ್ವರು ಸ್ಥಳದಲ್ಲೇ ಮೃತ್ಯು
ಅಪಘಾತದಲ್ಲಿ ಚರಣ್ ಸಿಂಗ್, ಅವರ ಪತ್ನಿ ಸುದೇಶ್, ಸೊಸೆ ಪ್ರೀತಿ ಹಾಗೂ ಮೊಮ್ಮಗ ಶಿವಾಂಶ್ ಮೃತಪಟ್ಟಿದ್ದಾರೆ. ಗಾಯಗೊಂಡವರನ್ನು ಪ್ರವೀಣ್, ಸಾಹದೇವ್ ಹಾಗೂ ಮತ್ತೋರ್ವ ವ್ಯಕ್ತಿ ಎಂದು ಗುರುತಿಸಲಾಗಿದೆ. ಅವರ ಹೆಸರು ತಕ್ಷಣ ಲಭ್ಯವಾಗಿಲ್ಲ. ಮೃತರು ಹರಿಯಾಣದ ಸೋನಿಪತ್ ಜಿಲ್ಲೆಯ ಬಹಾದುರ್ಗಢ ನಿವಾಸಿಗಳಾಗಿದ್ದು, ಹರಿದ್ವಾರಕ್ಕೆ ತೆರಳುತ್ತಿದ್ದ ವೇಳೆ ಹಲ್ಗೋಯಾ ಗ್ರಾಮದ ಬಳಿ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಸ್ಪತ್ರೆಗೆ ಸಾಗಿಸಿದರೂ ಬದುಕಲಿಲ್ಲ
ಅಪಘಾತ ಕಂಡ ಸ್ಥಳೀಯರು ಹಾಗೂ ವಾಹನ ಸವಾರರು ತಕ್ಷಣ ರಕ್ಷಣಾ ಕಾರ್ಯ ಆರಂಭಿಸಿದರು. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ, 108 ಆಂಬುಲೆನ್ಸ್ ಮೂಲಕ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಿದರು. ಆದರೆ ನಾಲ್ವರನ್ನು ಆಸ್ಪತ್ರೆಗೆ ತಲುಪುವಷ್ಟರಲ್ಲಿ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು. ಉಳಿದ ಮೂವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ವೈದ್ಯರು ತಿಳಿಸಿದ್ದಾರೆ.
ತನಿಖೆ ಆರಂಭ
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎರಡೂ ವಾಹನಗಳನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ. ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಪ್ರಮುಖ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಬೊಲೆರೊ ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ,(ಏಜೆನ್ಸೀಸ್).