ನ್ಯೂಸ್

ಕಾಶಿ ಯಾತ್ರೆ ಹೋಗುವವರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಕೊಡುಗೆ!

ಬೆಂಗಳೂರು: ಮುಜರಾಯಿ ಇಲಾಖೆ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಕಾಶಿ ಯಾತ್ರೆ ಸೇರಿದಂತೆ ಪುಣ್ಯ ಕ್ಷೇತ್ರಗಳಿಗೆ ತೆರಳುವ ರಾಜ್ಯದ ಜನತೆಗೆ ಸಿಹಿ ಸುದ್ದಿಯೊಂದನ್ನು ಇಂದು ಅಧಿಕೃತವಾಗಿ ಪ್ರಕಟಿಸಿದೆ.

ಕರ್ನಾಟಕ ಭಾರತ ಗೌರವ ಕಾಶಿ ದರ್ಶನ, ರೈಲು ಯಾತ್ರೆಯ ಮೂಲಕ ತೆರಳುವ ಪುಣ್ಯ ಕ್ಷೇತ್ರಗಳಾದ ವಾರಣಾಸಿ, ಅಯೋಧ್ಯೆ ಮತ್ತು ಪ್ರಯಾಗ್ ರಾಜ್ ಕ್ಷೇತ್ರಗಳ ಪ್ಯಾಕೇಜ್ ಯಾತ್ರೆಯಲ್ಲಿ ಈ ಬಾರಿ ಬಿಹಾರದ ಗಯಾ ಕ್ಷೇತ್ರದ ದರ್ಶನ ಸೇರ್ಪಡೆಗೊಳಿಸಿ, 8 ದಿನಗಳ ಪ್ರವಾಸವನ್ನು 9 ದಿನಗಳಿಗೆ ಹೆಚ್ಚಳ ಮಾಡಲಾಗಿದೆ. ಈ ಯೋಜನೆ ಅಡಿಯಲ್ಲಿ ಸದರಿ ಪ್ಯಾಕೇಜ್​ಗೆ ಈ ಹಿಂದೆ ನಿಗದಿ ಮಾಡಲಾಗಿದ್ದ ಸರ್ಕಾರದಿಂದ ನೀಡಲಾಗುವ ಸಹಾಯ ಧನ 5000/- ರೂ. ಮೊತ್ತವನ್ನು ಇದೀಗ 7500 ರೂ.ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ.

ಸದರಿ ಪ್ಯಾಕೇಜ್ ಯೋಜನೆಯಲ್ಲಿ ಹೊಸದಾಗಿ ಎಲ್​​ಎಚ್​ಬಿ ಕೋಚ್ ಗಳನ್ನು ಅಳವಡಿಸಲಾಗಿದ್ದು, ಇದರಲ್ಲಿ ಸುಸಜ್ಜಿತವಾದ ಅಡುಗೆ ಮನೆ ಹಾಗೂ ಇಬ್ಬರು ವೈದ್ಯರು ಸಹ ಯಾತ್ರಾರ್ಥಿಗಳ ಜೊತೆಯಲ್ಲಿ ಸೇವಾ ನಿರತರಾಗಿರುತ್ತಾರೆ.

ಆಗಸ್ಟ್​​ನಲ್ಲಿ ಹೊರಡಲಿರುವ 5ನೇ ಟ್ರಿಪ್ ದಿನಾಂಕ 29.08.2023 ರಂದು ನಿರ್ಗಮನವಾಗಿ ದಿನಾಂಕ 06.09.2023 ರಂದು ಆಗಮನ. ಅಂತೆಯೇ ಸೆಪ್ಟೆಂಬರ್​ನಲ್ಲಿ ಹೊರಡಲಿರುವ 6ನೇ ಟ್ರಿಪ್ ದಿನಾಂಕ 23.09.2023 ರಂದು ನಿರ್ಗಮನ, ದಿನಾಂಕ 02.10.2023 ರಂದು ಆಗಮನವಿರುತ್ತದೆ. ಸದರಿ ಯಾತ್ರೆಗೆ ತುಮಕೂರಿನಲ್ಲಿ ಬೋರ್ಡಿಂಗ್ ಮತ್ತು ಡಿ-ಬೋರ್ಡಿಂಗ್ ವ್ಯವಸ್ಥೆಯನ್ನು ಹೊಸದಾಗಿ ಕಲ್ಪಿಸಲಾಗಿರುತ್ತದೆ.

ಅಯೋಧ್ಯೆಗೆ ಭೇಟಿ ನೀಡುವ ರಾಜ್ಯದ ಭಕ್ತರ ಅನುಕೂಲಕ್ಕಾಗಿ ಕರ್ನಾಟಕ ಭವನ ವಸತಿ ಸಂಕೀರ್ಣ ನಿರ್ಮಾಣ ಮಾಡಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರಿಗೆ ಸುಮಾರು 5 ಎಕರೆ ಭೂಮಿ ಮಂಜೂರು ಮಾಡುವಂತೆ ಪತ್ರ ಬರೆದು ಕೋರಲಾಗುವುದು. ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಮುಜರಾಯಿ ಇಲಾಖೆರವರು ಸಮನ್ವಯ ಸಾಧಿಸಿ ತ್ವರಿತ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ.

ರಾಜ್ಯದ ದೇವಸ್ಥಾನಗಳ ಪೂಜಾ ಕಾರ್ಯ ಇತ್ಯಾದಿಗಳ ಕೆಲಸಕ್ಕೆಂದು ಸರ್ಕಾರ ಬಿಡುಗಡೆ ಮಾಡುವ 'ತಸ್ತಿಕ್' ಹಣವನ್ನು ನೇರವಾಗಿ ಅರ್ಚಕರ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಸೂಚನೆ ನೀಡಲಾಗಿದೆ.