ನ್ಯೂಸ್

ನೌಕಾಪಡೆ ಹಿರಿಯ ಅಧಿಕಾರಿಯ ಜೀವ ಉಳಿಸಿದ ನಾಯಿ; ಸ್ವಾಮಿ ನಿಷ್ಠೆಯೆಂದರೆ ಇದು

ನಾಯಿಗಳು ಹಾಗೂ ಮನುಷ್ಯರ ನಡುವಿನ ಸ್ನೇಹ ಸಾದಾಸೀದಾ ಆಗಿರುವುದಿಲ್ಲ. ಸಾಕಿದ ನಾಯಿಗಳು ಮಾಲೀಕರಿಗೆ ತುಂಬ ನಿಷ್ಠರಾಗಿರುತ್ತಾರೆ. ಮನೆಯ ಸದಸ್ಯರಂತೆಯೇ ಆಗಿಬಿಡುತ್ತಾರೆ. ಎಷ್ಟೆಷ್ಟೋ ಸಹಾಯಗಳನ್ನೂ ಮಾಡುತ್ತವೆ.

ಅದೆಷ್ಟೋ ನಾಯಿಗಳು ತಮ್ಮನ್ನು ಸಾಕಿದ ಮನೆಯವರ ಪ್ರಾಣ ಕಾಪಾಡಿದ್ದೂ ಇದೆ. ಅಪಾಯಗಳಿಂದ ಪಾರು ಮಾಡಿದ ಉದಾಹರಣೆಗಳೂ ಸಾಕಷ್ಟಿವೆ.

ಈಗ ಅಂಥದ್ದೇ ಒಂದು ಘಟನೆ ಯುಎಸ್​ನಿಂದ ವರದಿಯಾಗಿದೆ. ಯುಎಸ್​ ನೌಕಾಪಡೆಯಲ್ಲಿ ಕೆಲಸ ಮಾಡಿ, ನಿವೃತ್ತರಾಗಿದ್ದ ಹಿರಿಯರೊಬ್ಬರ ಪ್ರಾಣವನ್ನು ಅವರು ಸಾಕಿದ ನಾಯಿಯೇ ಕಾಪಾಡಿದೆ. ಶ್ವಾನದ ಸಮಯಪ್ರಜ್ಞೆ ಮಾಲೀಕಮ ಪ್ರಾಣ ಉಳಿಸಿದೆ.

ನೇವಿಯ ಹಿರಿಯ ಅಧಿಕಾರಿ ಹೆಸರು ರೂಡಿ ಆರ್ಮ್​ಸ್ಟ್ರಾಂಗ್​. ಅವರು ಸಾಕಿದ್ದ ನಾಯಿ ಮರಿಯ ಹೆಸರು ಬುಬು. ಒಂದು ದಿನ ಆರ್ಮ್​ಸ್ಟ್ರಾಂಗ್​ ಅವರು ತಮ್ಮ ನಾಯಿಯೊಂದಿಗೆ ಹೌಸ್​ಬೋಟ್​​ನಲ್ಲಿ ಕುರ್ಚಿ ಮೇಲೆ ಕುಳಿತು, ಕಾಫಿ ಕುಡಿಯುತ್ತಿದ್ದರು. ಆಗ ಒಮ್ಮೆಲೇ ಅವರ ಕೈ ಚಲನೆ ನಿಂತು ಹೋಯಿತು. ಎದ್ದು ನಿಲ್ಲಲೂ ಸಾಧ್ಯವಾಗಲಿಲ್ಲ. ಹಾಗೇ ಕೆಳಕ್ಕೆ ಬಿದ್ದರು.

ಅಲ್ಲಿಯೇ ಇದ್ದ ಬುಬು ಒಂದು ಕ್ಷಣವೂ ತಡ ಮಾಡದೆ ಕೂಡಲೇ ಹೋಗಿ ಹಡಗುಗಳ ದುರಸ್ತಿ ಮಾಡುವವನನ್ನು ಕರೆದುಕೊಂಡು ಬಂತು. ಆರ್ಮಸ್ಟ್ರಾಂಗ್​ ಸ್ಥಿತಿ ನೋಡಿದ ಅವರು ಆಂಬುಲೆನ್ಸ್​ಗೆ ಕರೆ ಮಾಡಿದರು.

ಆರ್ಮಸ್ಟ್ರಾಂಗ್ ಅವರನ್ನು ಕೆರೊಲಿನಾದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರು ಹುಷಾರಾಗುವವರೆಗೂ ಕಾದ ಬುಬು ಮತ್ತೀಗ ಮಾಲೀಕನ ಮಡಿಲು ಸೇರಿಕೊಂಡಿದೆ.

ಅಷ್ಟೇ ಅಲ್ಲ, ಇವರಿಬ್ಬರ ಫೋಟೋವನ್ನೂ ಆಸ್ಪತ್ರೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ. ಅದನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್​ ಕೂಡ ಮಾಡಿದ್ದಾರೆ. (ಏಜೆನ್ಸೀಸ್​)