ನ್ಯೂಸ್

ದೇವೇಗೌಡರ ಎದುರಲ್ಲೇ ಕಣ್ಣೀರಿಟ್ಟ ಜೆಡಿಎಸ್​ ಅಭ್ಯರ್ಥಿಯ ಅತ್ತೆ! ಇವರ ಮಾತು ಕೇಳಿ ಸೊಸೆ ಕಣ್ಣಲ್ಲೂ ತುಂಬಿ ಬಂತು

ವಿಜಯಪುರ: ಸಿಂದಗಿ ಉಪಸಮರ ರಂಗೇರಿದ್ದು, ಭಾನುವಾರ ನಡೆದ ಜೆಡಿಎಸ್​ ಮಹಿಳಾ ಸಮಾವೇಶದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಎದುರಲ್ಲೇ ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ ಕಣ್ಣೀರಿಟ್ಟ ಘಟನೆ ನಡೆಯಿತು.

ಸಿಂದಗಿ ಪಟ್ಟಣದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಸೊಸೆ ನಾಜಿಯಾ ಪರ ಮತಯಾಚಿಸಿದ ಅತ್ತೆ ನಸೀಮಾ, 'ದಯವಿಟ್ಟು ನನ್ನ ಸೊಸೆಗೆ ಮತ ಕೊಟ್ಟು ಗೆಲ್ಲಿಸಿ' ಎಂದು ಕೈ ಮುಗಿದು ಕಣ್ಣೀರಿಟ್ಟರು. 'ನನ್ನ ಗಂಡ ಚುನಾವಣಾ ಪ್ರಚಾರಕ್ಕೆ ಹೋದಾಗ ಅಪಘಾತದಲ್ಲಿ ಸಾವೀಗೀಡಾಗಿದ್ದಾರೆ. ಈಗ ನನ್ನ ಸೊಸೆ ನಾಜಿಯಾ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ದಯವಿಟ್ಟು ನನ್ನ ಸೊಸೆಗೆ ಮತ ಕೊಟ್ಟು ಗೆಲ್ಲಿಸಿ' ಎಂದು ನಸೀಮಾ ಕೈ ಮುಗಿದು, ಕಣ್ಣೀರಿಟ್ಟು ಬೇಡಿಕೊಂಡರು. ಪಕ್ಕದಲ್ಲೇ ನಿಂತಿದ್ದ ನಾಜಿಯಾ ಅಂಗಡಿ ಕೂಡ ವೇದಿಕೆಯಲ್ಲೇ ಕಣ್ಣೀರಿಟ್ಟರು.