ನ್ಯೂಸ್

ಅಪ್ಪು ಫೋಟೋಗೆ ಶಾಲು ಹೊದಿಸಿ ಸಿದ್ಧಶ್ರೀ ಪ್ರಶಸ್ತಿ ಪ್ರದಾನ: ನೆರೆದಿದ್ದವರ ಮನಸ್ಸು ಭಾರ.. ಮಾತು ಮೌನ...

arunakunigal

ಆಳಂದ(ಕಲಬುರಗಿ): ನಟ ಪುನೀತ್​ ರಾಜ್​ಕುಮಾರ್​ ಅವರ ಭಾವಚಿತ್ರಕ್ಕೆ ಶಾಲು ಹೊದಿಸಿ ಸಿದ್ಧಶ್ರೀ ಪ್ರಶಸ್ತಿ ಪ್ರದಾನ ಮಾಡುತ್ತಿದ್ದರೆ ನೆರೆದಿದ್ದವರ ಮನಸ್ಸು ಭಾರ... ಮಾತು ಮೌನ... ಗಂಟಲಲ್ಲೇ ದುಃಖ ಊದಿತ್ತು, ಎಷ್ಟೇ ತಡೆದರೂ ಕಣ್ಣಂಚಲ್ಲಿ ನೀರು ಜಿನುಗುತ್ತಿತ್ತು... ಜಿಡಗಾ-ಮುಗಳಖೋಡ-ಕೋಟನೂರು ಮಠಗಳ ಪೀಠಾಧಿಪತಿ ಶ್ರೀ ಷಡಕ್ಷರಿ ಡಾ.ಮುರುಘರಾಜೇಂದ್ರ ಮಹಾಸ್ವಾಮೀಜಿ ಅವರ 37ನೇ ಗುರುವಂದನೆ(ಜನ್ಮ ದಿನ) ಕಾರ್ಯಕ್ರಮದಲ್ಲಿ ಅಪ್ಪುಗೆ ಮರಣೋತ್ತರವಾಗಿ 'ಸಿದ್ಧಶ್ರೀ' ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡುವ ವೇಳೆ ಕಂಡು ಬಂದ ದೃಶ್ಯ.

ಜಿಡಗಾ ನವಕಲ್ಯಾಣ ಮಠದಲ್ಲಿ ಗುರುವಾರ ರಾತ್ರಿ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ ಅಪ್ಪು ಭಾವಚಿತ್ರವನ್ನಿಟ್ಟು ಅದರ ಮುಂದೆ ಪ್ರಶಸ್ತಿಯನ್ನು ಇಡಲಾಯಿತು. ಇದೇ ವೇಳೆ ಮಾತನಾಡಿದ ಶ್ರೀ ಡಾ.ಮುರುಘರಾಜೇಂದ್ರ ಸ್ವಾಮೀಜಿ, ಪುನೀತ್ ರಾಜಕುಮಾರ್ ಅವರಿಗೆ ಸಿದ್ಧಶ್ರೀ ಪ್ರಶಸ್ತಿ ನೀಡಬೇಕು ಎಂದು ಮೊದಲೇ ನಿರ್ಧರಿಸಲಾಗಿತ್ತು. ಆದರೆ ವಿಧಿ ನಿರ್ಧಾರವೇ ಬೇರೆಯಾಗಿತ್ತು. ಮರಣೋತ್ತರವಾಗಿ ಪ್ರಶಸ್ತಿ ನೀಡುವ ಸಮಯ ಬರುತ್ತದೆ ಎಂದು ಊಹಿಸಿರಲಿಲ್ಲ ಎನ್ನುತ್ತಲೇ ಭಾವುಕರಾದರು. ಕಾರ್ಯಕ್ರಮದಲ್ಲಿ ರಾಜಕುಮಾರ್ ಕುಟುಂಬದವರು ಪಾಲ್ಗೊಂಡು ಪುನೀತ್ ಪರವಾಗಿ ಪ್ರಶಸ್ತಿ ಸ್ವೀಕರಿಸಬೇಕಿತ್ತು. ಕಾರಣಾಂತರಗಳಿಂದ ಬರಲು ಆಗಿರಲಿಲ್ಲ. ನಟ ರಾಘವೇಂದ್ರ ರಾಜಕುಮಾರ್ ಆನ್​ಲೈನ್ ಮೂಲಕ ಕಾರ್ಯಕ್ರಮ ವೀಕ್ಷಿಸಿದರು. 'ನಿಮ್ಮ ಪ್ರೀತಿಯನ್ನು ಎಂದಿಗೂ ಮರೆಯಲ್ಲ. ಹಲವಾರು ಕಾರಣಗಳಿಂದಾಗಿ ಬೃಹತ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಗುರುಗಳಲ್ಲಿ ಕ್ಷಮೆ ಕೇಳುತ್ತೇನೆ. ಪುನೀತ್ ರಾಜಕುಮಾರ್​ಗೆ ನೀಡಿರುವ ಪ್ರಶಸ್ತಿಯನ್ನು ನಿಮ್ಮ ಪಾದಕ್ಕೆ ಅರ್ಪಿಸುತ್ತೇವೆ. ರಾಜ್ ಕುಟುಂಬದ ಮೇಲೆ ಶ್ರೀಮಠದ ಶ್ರೀರಕ್ಷೆ ಹೀಗೆ ಇರಲಿ... ಎಂದು ಭಾವುಕರಾದರು. ಈ ಎಲ್ಲ ದೃಶ್ಯವನ್ನು ನೋಡಿ ನೆರೆದಿದ್ದವರೂ ಗದ್ಗದಿತರಾದರು.

ಗಮನಸೆಳೆದ ಅಪ್ಪು ಕಲಾಕೃತಿ: ನಟ ಪುನೀತ್ ರಾಜಕುಮಾರ್ ಅವರಿಗೆ ರಾಷ್ಟ್ರೀಯ ಸಿದ್ಧಶ್ರೀ ಪ್ರಶಸ್ತಿ ಜತೆಗೆ ಏನಾದರೂ ವಿಶೇಷ ಕೊಡುಗೆ ನೀಡಬೇಕು ಎಂದು ಶ್ರೀ ಡಾ. ಮುರುಘರಾಜೇಂದ್ರ ಸ್ವಾಮಿಗಳು ಯೋಚಿಸಿದ್ದರು. ಅವರ ಇಚ್ಛಾಶಕ್ತಿಯಿಂದಲೇ ಅದ್ಬುತ ಕಲಾಕೃತಿ ಸಿದ್ಧವಾಗಿದೆ. ನಟ ಪುನೀತ್ ರಾಜಕುಮಾರ್ ಅವರ ಸಾಮಾಜಿಕ ಕಾರ್ಯಗಳಾದ ವೃದ್ಧಾಶ್ರಮ, ಸರ್ಕಾರಿ ಶಾಲೆಗಳ ರಕ್ಷಣೆ, ನೇತ್ರದಾನ ಸೇರಿ ವಿವಿಧ ಕಾರ್ಯಗಳನ್ನು ಚಿತ್ರದಲ್ಲಿ ಬಿಂಬಿಸಲಾಗಿದೆ. ಇಂಗ್ಲಿಷ್ ಶೈಲಿಯ ಕಲಾಕೃತಿಯಾಗಿದ್ದು, ಸುಮಾರು 20 ಕಲಾವಿದರ ತಂಡ ಸತತ 120 ಗಂಟೆ ನಿರಂತರ ಕೆಲಸ ಮಾಡಿ ಅದ್ಬುತ ಚಿತ್ರವನ್ನು ತಯಾರಿಸಿದ್ದಾರೆ.

ಅಪ್ಪು ನಮ್ಮಿಂದ ದೂರವಾಗಿಲ್ಲ. ಎಲ್ಲರ ಮನಸ್ಸಿನಲ್ಲಿ ಅಜರಾಮರವಾಗಿದ್ದಾರೆ. ದಾನ- ಧರ್ಮಗಳ ಮೂಲಕ ಎಲ್ಲರಲ್ಲೂ ಅಪ್ಪು ನೆಲೆಯೂರಿದ್ದಾರೆ. ಪುನೀತ್ ಅವರನ್ನು ಯುವ ಜನತೆ ರೋಲ್ ಮಾಡಲ್ ಆಗಿ ಇಟ್ಟುಕೊಳ್ಳಬೇಕು.

| ಶ್ರೀ ಡಾ.ಮುರುಘರಾಜೇಂದ್ರ ಸ್ವಾಮೀಜಿ ಪೀಠಾಧೀಪತಿ, ಮುಗಳಖೋಡ-ಜಿಡಗಾ ಮಠ

ವಿಜಯ್​​​ ಪ್ರಕಾಶ್ ಭಾವುಕ​: ಕಾರ್ಯಕ್ರಮದಲ್ಲಿ 'ಗೊಂಬೆ ಹೇಳುತೈತೆ' ಹಾಡು ಹಾಡುವ ಮುನ್ನ ಖ್ಯಾತ ಗಾಯಕ ವಿಜಯ್​ ಪ್ರಕಾಶ್​​ ಅವರು ಭಾವುಕರಾದರು. ಗೊಂಬೆ ಹೇಳುತೈತೆ ಹಾಡನ್ನು ನಾನು ರಾಜಕುಮಾರ ಅವರಿಗಾಗಿ ಹಾಡಿದ್ದೆ. ಇದೇ ಹಾಡು ಇಂದು ಈ ರೀತಿ ಅಗಲಿದ ಅಪ್ಪು ಅವರಿಗಾಗಿ ಹಾಡುವ ಪ್ರಸಂಗ ಬರಬಹುದೆಂದು ಕಲ್ಪನೆಯೂ ಮಾಡಿರಲಿಲ್ಲ ಎಂದರು.

ವಿವಿಧ ಸಾಧಕರಿಗೆ ಪ್ರಶಸ್ತಿ: ರಾಷ್ಟ್ರೀಯ ಮಟ್ಟದ ಸಿದ್ಧಶ್ರೀ ಪ್ರಶಸ್ತಿ ಜತೆಗೆ ವಿವಿಧ ಸಾಧಕರಿಗೆ ಜಿಡಗಾ, ಮುಗಳಖೋಡ ಹಾಗೂ ಕೋಟನೂರ ಮಠದಿಂದ ಹಲವು ಪ್ರಶಸ್ತಿಗಳನ್ನು ನೀಡಲಾಯಿತು. ಖ್ಯಾತ ಗಾಯಕ ವಿಜಯ್ ಪ್ರಕಾಶಗೆ ಸಿದ್ಧಶ್ರೀ ಸಂಗೀತ ಸಾಮ್ರಾಟ್, ನಿರೂಪಕಿ ಅನುಶ್ರೀಗೆ ಸಿದ್ಧಶ್ರೀ ಕನ್ನಡದ ಹೆಮ್ಮೆಯ ನಿರೂಪಕಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.