ನ್ಯೂಸ್

ಹರ್ಷನ ಹತ್ಯೆ ಪ್ರಕರಣ: ಹೆಜ್ಜೇನು ದಾಳಿ ನಡುವೆಯೂ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ

ಶಿವಮೊಗ್ಗ: ಬಜರಂಗ ದಳದ ಕಾರ್ಯಕರ್ತ ಹರ್ಷನ ಹತ್ಯೆ ಮಾಡಿದವರಿಗೆ ಮರಣದಂಡನೆ ವಿಧಿಸುವಂತೆ ಆಗ್ರಹಿಸಿ ಸೋಮವಾರ ಹಿಂದು ಕಾರ್ಯಕರ್ತರು ಜಿಲ್ಲಾಧಿಕಾರಿ‌ ಕಚೇರಿ ಎದುರು ಹೆಜ್ಜೇನು ದಾಳಿ ನಡುವೆಯೂ ಪ್ರತಿಭಟನೆ ನಡೆಸಿದರು.

ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದ ದಳದ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ‌ ಸಭೆ ಆಯೋಜಿಸಲಾಗಿತ್ತು. ಆದರೆ ಇದ್ದಕ್ಕಿದ್ದಂತೆ ಹೆಜ್ಜೇನು ಪ್ರತಿಭಟನಾಕಾರರ ಮೇಲೆ ದಾಳಿ ನಡೆಸಿತು. ಆದರೂ ಬೆದರದ ಕಾರ್ಯಕರ್ತರು ಪ್ರತಿಭಟನೆ ಮುಂದುವರಿಸಿ ತಾವು ಯಾವುದಕ್ಕೂ ಬಗ್ಗುವುದಿಲ್ಲ ಎಂಬ ಸಂದೇಶವನ್ನು ಸಮಾಜಕ್ಕೆ ರವಾನಿಸಿದರು.

ಹೆಜ್ಜೇನು ದಾಳಿಯಿಂದ ಹತ್ತಾರು ಹಿಂದು ಕಾರ್ಯಕರ್ತರು, ವಿದ್ಯಾರ್ಥಿಗಳು, ಪತ್ರಕರ್ತರೂ ಗಾಯಗೊಂಡರು. ಡಿಸಿ ಕಚೇರಿ ಎದುರೇ ಬೆಂಕಿ ಹಚ್ಚಿ(ಹೆಜ್ಜೇನು ದಾಳಿಯಿಂದ ತಪ್ಪಿಸಿಕೊಳ್ಳಲು) ಪ್ರತಿಭಟನೆ ಮುಂದುವರಿಸಿದರು. ವಿಎಚ್​ಪಿ ಜಿಲ್ಲಾಧ್ಯಕ್ಷ ಜೆ.ಆರ್.ವಾಸುದೇವ ಮಾತನಾಡಿ, ಹರ್ಷದ ಹತ್ಯೆ ಪ್ರಕರಣದಲ್ಲಿ ಪಾತ್ರಧಾರಿಗಳ ಬಂಧನವಾಗಿದೆ. ಸೂತ್ರಧಾರಿಗಳನ್ನೂ ಬಂಧಿಸಿ ಗಲ್ಲಿಗೇರಿಸಬೇಕು ಆಗ್ರಹಿಸಿದರು.

ಆರ್​ಎಸ್​ಎಸ್ ಮುಖಂಡ ಮಧುಕರ್ ಮಾತನಾಡಿ, ಇನ್ಮುಂದೆ ಒಬ್ಬೇ ಒಬ್ಬ ಹಿಂದು ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದರೂ ಸಹಿಸುವುದಿಲ್ಲ.‌ ಇದು ಇಲ್ಲಿಗೆ ಕೊನೇ ಆಗಬೇಕು. ಇಲ್ಲದವಾದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.