ನ್ಯೂಸ್

ಮಹಿಳೆಯ ಕಾಟ ಸಹಿಸಲಾಗದೆ ಯುವಕ ಆತ್ಮಹತ್ಯೆ: ಸಾವಿಗೂ ಮುನ್ನ ಆತ ಮಾಡಿಟ್ಟ ವಿಡಿಯೋದಲ್ಲಿದೆ ರಹಸ್ಯ

ಚಿಕ್ಕಬಳ್ಳಾಪುರ: ಆಕೆಗೆ ಈಗಾಗಲೇ ಮದುವೆ ಆಗಿದೆ. ಆದರೂ ಯುವಕನ ಜತೆ ಅಕ್ರಮ ಸಂಬಂಧ ಬೆಳೆದಿತ್ತು. ಆರಂಭದಲ್ಲಿ ಚೆನ್ನಾಗಿಯೇ ಇದ್ದರು. ಇತ್ತೀಚಿಗೆ ಪ್ರೇಯಸಿಯಿಂದ ಯುವಕ ಅಂತರ ಕಾಪಾಡಿಕೊಳ್ಳಲು ಯತ್ನಿಸುತ್ತಿದ್ದ. ಈ ವಿಚಾರ ಗೊತ್ತಾಗುತ್ತಿದ್ದಂತೆ ಯುವಕನ ಬೆನ್ನತ್ತಿದ ಆಕೆ, ನೀನು ನನಗೇ ಬೇಕು. ಯಾರಿಗೂ ನಾನು ಬಿಟ್ಟುಕೊಡಲ್ಲ ಎಂದು ಪಟ್ಟು ಹಿಡಿದಿದ್ದಳು. ಪ್ರೇಯಸಿಯ ಕಿರುಕುಳ ತಾಳಲಾರದೇ ಯುವಕ ದುರಂತ ಅಂತ್ಯ ಕಂಡಿದ್ದಾನೆ.

ಪರಸ್ತ್ರೀ ಜತೆಗಿನ ಸಲ್ಲಾಪ ಯುವಕ ಪ್ರಾಣವನ್ನೇ ಬಲಿ ಪಡೆದಿದೆ. ಇಂತಹ ದುರ್ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕು ಕುಂದಲಗುರ್ಕಿ ಗ್ರಾಮದಲ್ಲಿ ಸಂಭವಿಸಿದೆ. ಮುನಿಕೃಷ್ಣ(28) ಮೃತ ದುರ್ದೈವಿ.

ಮುನಿಕೃಷ್ಣಗೆ ವಿವಾಹಿತ ಮಹಿಳೆ ಜತೆ ಅನೈತಿಕ ಸಂಬಂಧವಿತ್ತು. ಇತ್ತೀಚಿಗೆ ಈತ ಬೇರೊಬ್ಬ ಯುವತಿ ಜತೆ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದ. ಈ ವಿಚಾರ ತಿಳಿದು ಕೆಂಡಾಮಂಡಲವಾಗಿದ್ದ ಪ್ರೇಯಸಿ, ಮುನಿಕೃಷ್ಣಗೆ ಮಾನಸಿಕ ಕಿರುಕುಳ ಕೊಡಲಾರಂಭಿಸಿದ್ದಳು. ಆಕೆಯ ಕಾಟ ಸಹಿಸಲಾಗದೆ ಬೇಸತ್ತ ಯುವಕ, ಸೆಲ್ಫಿ ವಿಡಿಯೋ ಮಾಡಿ‌ ತಲೆತಲೆ ಚಚ್ಚಿಕೊಂಡು, ಕೆನ್ನೆಗೆ ಫಟಫಟನೆ ಹೊಡೆದುಕೊಂಡು... ತಾನು ತಪ್ಪು ಮಾಡಿಬಿಟ್ಟೆ ಎಂಬಂತೆ ಬಿಕ್ಕಿಬಿಕ್ಕಿ ಅತ್ತಿದ್ದಾನೆ. ಬಳಿಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಷ ಸೇವಿಸುವ ದೃಶ್ಯ ಮೊಬೈಲ್​ನಲ್ಲಿ ರೆಕಾರ್ಡ್​ ಆಗಿದೆ. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.