ನ್ಯೂಸ್

ಪ್ರಿಯಕರನಿಗಾಗಿ ಸುಪಾರಿ ಕೊಟ್ಟು ನಡುರಸ್ತೆಯಲ್ಲಿ ಗಂಡನಿಗೆ ಗುಂಡು ಹಾರಿಸಿದ ಪತ್ನಿ! ಆ ನಂತರ ಆಗಿದ್ದೇ ಮತ್ತೊಂದು...

ಚಿಕ್ಕಬಳ್ಳಾಪುರ: ವಿವಾಹಿತ ಮಹಿಳೆಯೊಬ್ಬಳು ಗಂಡನಿದ್ದರೂ ಪರಪುರುಷನ ಸಹವಾಸಕ್ಕೆ ಬಿದ್ದು ಮಾಡಿಕೊಂಡ ಅವಾಂತರ ಅಷ್ಟಿಷ್ಟಲ್ಲ. ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಗಂಡನನ್ನೇ ಕೊಲ್ಲುವಂತೆ ಸುಪಾರಿ ಕೊಟ್ಟು ನಡುರಸ್ತೆಯಲ್ಲಿ ಗುಂಡು ಹೊಡೆಸಿದ್ದಾಳೆ. ಗಂಡನ ಅದೃಷ್ಟವಶಾತ್​ ಅಲ್ಲಿ ಆಗಿದ್ದೇ ಮತ್ತೊಂದು...

ಆ. 18ರಂದು ಶಿಡ್ಲಘಟ್ಟ ನಗರದ ಇದ್ಲೂಡು ರಸ್ತೆಯಲ್ಲಿ ಬೈಕ್​ನಲ್ಲಿ ಹೋಗುತ್ತಿದ್ದ ಮಾರುತಿ ನಗರದ ಮೇಸ್ತ್ರಿ ಗೋವಿಂದಪ್ಪ(37) ಎಂಬಾತನ ಮೇಲೆ ಪಲ್ಸರ್ ಬೈಕ್​ನಲ್ಲಿ ಬಂದ ಅಪರಿಚಿತರು ನಾಡ ಬಂದೂಕಿನಿಂದ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದರು. ಗೋವಿಂದಪ್ಪನ ಬೆನ್ನಿನ ಭಾಗ ಸೇರಿ ತಲೆಯ ಭಾಗದಲ್ಲಿ ಗಾಯಗಳಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪ್ರಕರಣ ಬೆನ್ನತ್ತಿದ ಪೊಲೀಸರಿಗೆ ಈ ಕೊಲೆ ಯತ್ನದ ಸಂಚಿನ ರೂವಾರಿ ಗೋವಿಂದಪ್ಪನ ಪತ್ನಿ ಸುಮಿತ್ರಾ ಎಂದು ಅರಿವಿಗೆ ಬರುತ್ತಿದ್ದಂತೆ ಆಕೆಯನ್ನ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಎಲ್ಲವೂ ಬಹಿರಂಗಗೊಂಡಿದೆ.

ಸುಮಿತ್ರಾ ಜತೆ ಮುನಿಕೃಷ್ಣ ಎಂಬಾತನಿಗೆ ಅಕ್ರಮ ಸಂಬಂಧ ಇತ್ತಂತೆ. ಇದೇ ವಿಚಾರವಾಗಿ ಗೋವಿಂದಪ್ಪ ಪತ್ನಿ ಸುಮಿತ್ರಾ ಜತೆ ಜಗಳ ತೆಗೆಯುತ್ತಿದ್ದ ಎನ್ನಲಾಗಿದೆ. ಈ ವಿಚಾರವಾಗಿ ಕುಪಿತಗೊಂಡ ಸುಮಿತ್ರಾ, ಗಂಡನನ್ನೇ ಕೊಲೆ ಮಾಡಲು ಸಂಚು ರೂಪಿಸಿದ್ದಳು. ಗೋವಿಂದಪ್ಪನನ್ನ ಕೊಲೆ ಮಾಡುವಂತೆ ಸುಮಿತ್ರಾ ಹೇಳಿದಾಗ ಮುನಿಕೃಷ್ಣ ಒಪ್ಪಿಲ್ಲ. ಕೊನೆಗೆ ಆತನ ಸಹೋದರ ಕಿಟ್ಟಿ ಅಲಿಯಾಸ್ ರಾಮಕೃಷ್ಣನಿಗೆ ಕೊಲೆ ಮಾಡಿದರೆ 1.5 ಲಕ್ಷ ರೂ. ನೀಡುವುದಾಗಿ ಹೇಳಿದ್ದಳು. ಇದಕ್ಕೊಪ್ಪಿದ ಕಿಟ್ಟಿ, ಡಬರಗಾನಹಳ್ಳಿಯ ಚಿನ್ನಪ್ಪನಿಂದ ಡಬಲ್ ಬ್ಯಾರೆಲ್ ನಾಡ ಬಂದೂಕನ್ನು ಪಡೆದುಕೊಂಡಿದ್ದ. ನಂತರ ತನ್ನ ಸ್ನೇಹಿತರಾದ ಲಾರಿ ಕ್ಲೀನರ್ ಪ್ರವೀಣ್ ಮತ್ತು ಕೋಲಾರದ ಐಟಿ ಕಂಪನಿಯಲ್ಲಿ ಲಿಫ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಹರೀಶ್​ಗೆ ಸುಪಾರಿ ನೀಡಿ ಕೊಲೆ ಮಾಡಲು ಸಂಚು ರೂಪಿಸಿದ್ದ. ಅದರಂತೆ ಗೋವಿಮದಪ್ಪನ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ.

ಈ ಪ್ರಕರಣ ಸಂಬಂಧ ಗೋವಿಂದಪ್ಪನ ಪತ್ನಿ ಸುಮಿತ್ರಾ(28) ಹಾಗೂ ಆಕೆಗೆ ಸಹಕರಿಸಿದ ದೊಡ್ಡದಾಸರಹಳ್ಳಿಯ ಮುನಿಕೃಷ್ಣ(29), ಅದೇ ಗ್ರಾಮದ ಕಿಟ್ಟಿ ಅಲಿಯಾಸ್ ರಾಮಕೃಷ್ಣ(28), ಪ್ರವೀಣ್(25), ಹರೀಶ್(21), ಡಬರಗಾನಹಳ್ಳಿಯ ಚಿನ್ನಯ್ಯ ಎಂಬುವವರನ್ನು ಶಿಡ್ಲಘಟ್ಟ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ