ಶಿವಮೊಗ್ಗ: ಕರೊನಾ ಹಿನ್ನೆಲೆ 20 ತಿಂಗಳ ಬಳಿಕ 1ರಿಂದ 5ನೇ ತರಗತಿ ಮಕ್ಕಳಿಗೆ ಇಂದಿನಿಂದ ಶಾಲೆಗಳು ತೆರೆದಿವೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಶಿವಮೊಗ್ಗ ನಗರ ಹೊರವಲಯದ ಮಲವಗೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದರು.
ಜಿಲ್ಲಾ ಪ್ರವಾಸ ಕೈಗೊಂಡಿರುವ ಸಚಿವ ನಾಗೇಶ್, ಬೆಂಗಳೂರು-ಹೊನ್ನಾವರ ಹೆದ್ದಾರಿಗೆ ಹೊಂದಿಕೊಂಡಿರುವ ಶಾಲೆಗೆ ತೆರಳಿ ಮಕ್ಕಳಿಗೆ ಗುಲಾಬಿ ಹೂವು ಮತ್ತು ಚಾಕೋಲೇಟ್ ಕೊಟ್ಟು ಸ್ವಾಗತಿಸಿದರು. ಬಳಿಕ ಶಾಲೆ ಆರಂಭದ ಬಗ್ಗೆ ಮಕ್ಕಳ ಜತೆ ಮಾತನಾಡಿ ಹುರಿದುಂಬಿಸಿದರು. ರಜೆ ದಿನಗಳಲ್ಲಿ ಏನೇನು ಮಾಡಿದ್ದೀರಿ. ಶಾಲೆ ಆರಂಭದ ಖುಷಿ ಇದೆಯಾ? ಎಂದು ಪ್ರಶ್ನಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಶಾಲೆಗಳ ಪುನಾರಂಭದ ಬಗ್ಗೆ ಸಂತಸ ವ್ಯಕ್ತಪಡಿಸಿದರು. 10-15 ದಿನಗಳ ಹಿಂದೆಯೇ ಪಾಲಕರು ಶಾಲಾ ಆರಂಭದ ಬಗ್ಗೆ ಕೇಳುತ್ತಿದ್ದರು. ವಾರದ ಹಿಂದಷ್ಟೇ ಸಿಎಂ ಬಸವರಾಬ ಬೊಮ್ಮಾಯಿ ನೇತೃತ್ವದಲ್ಲಿ ಟಾಸ್ಕ್‌ಫೋರ್ಸ್ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಧಾರದಿಂದ ಸೋಮವಾರದಿಂದ 1ರಿಂದ 5ನೇ ತರಗತಿವರೆಗೆ ಶಾಲೆ ಆರಂಭಿಸಲಾಗಿದೆ. ತಾತ್ಕಲಿಕವಾಗಿ ಮಧ್ಯಾಹ್ನದವರೆಗೆ ಮಾತ್ರ ತರಗತಿ ನಡೆಯಲಿವೆ. ನವೆಂಬರ್ 1ರ ಬಳಿಕ ಪೂರ್ಣಪ್ರಮಾಣದಲ್ಲಿ ತರಗತಿ ನಡೆಸಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ 48 ಸಾವಿರ ಸರ್ಕಾರಿ ಶಾಲೆಗಳಿದ್ದು ಅವುಗಳಲ್ಲಿ 28,900 ಶಾಲೆಗಳು ಸಂಪೂರ್ಣ ಸುಸ್ಥಿತಿಯಲ್ಲಿವೆ. 7ರಿಂದ 8 ಸಾವಿರ ಶಾಲೆಗಳಲ್ಲಿ ಕೆಲ ಕೊಠಡಿಗಳು ಶಿಥಿಲಗೊಂಡಿವೆ. ಕೆಲ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕಡಿಮೆ ಇದ್ದು ಹೊಂದಾಣಿಕೆ ಮಾಡಿಕೊಂಡು ಸುಸ್ಥಿತಿಯಲ್ಲಿರುವ ಕೊಠಡಿಗಳಲ್ಲೇ ಪಾಠ ಪ್ರವಚನ ನಡೆಸಲು ಸೂಚಿಸಲಾಗಿದೆ ಎಂದು ಹೇಳಿದರು.
ಯಾವುದೇ ಕಾರಣಕ್ಕೂ ಪಠ್ಯ ಕಡಿತವಿಲ್ಲ: ಈಗಷ್ಟೇ ಶಾಲೆಗಳು ಆರಂಭಗೊಂಡಿವೆ. ಆದರೆ ಪಠ್ಯವನ್ನು ಕಡಿತಗೊಳಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಶಿಕ್ಷಣ ಸಚಿವರು ಸ್ಪಷ್ಟಪಡಿಸಿದರು. ಮುಂದಿನ ದಿನಗಳಲ್ಲಿ ಆ ಬಗ್ಗೆ ಆಲೋಚಿಸಲಾಗುವುದು. ಡಿಸೆಂಬರ್‌ನಲ್ಲಿ ಮತ್ತೊಮ್ಮೆ ಸಭೆ ನಡೆಸಿ ಪರೀಕ್ಷೆಗೆ ಪಠ್ಯ ಕಡಿತಗೊಳಿಸುವ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು.