ಶ್ರೀವಸಿಷ್ಠರು ಶ್ರೀರಾಮನಿಗೆ ವಿದೂರಥನ ರಾಜಧಾನಿಯ ಸಮೀಪ ನಡೆಯುತ್ತಿರುವ ಯುದ್ಧದ ವರ್ಣನೆಯನ್ನು ಮುಂದುವರಿಸಿದ್ದಾರೆ. ಯೋಗವಾಸಿಷ್ಠವು ಶಾಸ್ತ್ರಗ್ರಂಥವೂ ಹೌದು, ಕಾವ್ಯಗ್ರಂಥವೂ ಹೌದು. ವೇದಾಂತದ ಪ್ರಮೇಯಗಳನ್ನು ತನ್ನದೇ ಆದ ರೀತಿಯಲ್ಲಿ ಪ್ರತಿಪಾದಿಸಿರುವುದರಿಂದ ಇದಕ್ಕೆ ಶಾಸ್ತ್ರಗ್ರಂಥದ ಪಟ್ಟ ಬರುತ್ತದೆ. ಶ್ರೀರಾಮನ ವೈರಾಗ್ಯ, ಲೀಲಾ ಮಹಾರಾಣಿಗೆ ಆದ ಬ್ರಹ್ಮಾಂಡ ದರ್ಶನ, ವಿದೂರಥನ ಯುದ್ಧ, ಮುಂತಾದವುಗಳನ್ನು ಕಾವ್ಯ ಶೈಲಿಯಲ್ಲಿ ವರ್ಣನೆ ಮಾಡುವುದರಿಂದ ಕಾವ್ಯದ ಪಟ್ಟವೂ ಇದಕ್ಕೆ ಸಲ್ಲುತ್ತದೆ. ಉಪಮಾ, ಶ್ಲೇಷ ಮುಂತಾದ ಅಲಂಕಾರಗಳನ್ನು ಬಳಸಿ ಇವುಗಳನ್ನು ವರ್ಣಿಸಲಾಗಿದೆ. ಇತ್ತೀಚಿಗೆ ಯೋಗವಾಸಿಷ್ಠದ ಲೋಕಾರ್ಪಣೆಯ ಸಂದರ್ಭದಲ್ಲಿ ಯತಿವರೇಣ್ಯರೊಬ್ಬರು ಹೇಳಿದ್ದರು ‘ಉಪಮಾ ಕಾಳಿದಾಸಸ್ಯ’ (ಉಪಮಾಲಂಕಾರವನ್ನು ಬಳಸುವಲ್ಲಿ ಮಹಾಕವಿ ಕಾಳಿದಾಸನಷ್ಟು ಶ್ರೇಷ್ಠರು ಯಾರೂ ಇಲ್ಲ) ಈ ಮಾತನ್ನು ಯೋಗವಾಸಿಷ್ಠವು ಮೀರಿ ನಿಲ್ಲುತ್ತದೆ. ಕಾಳಿದಾಸನ ಅಪ್ಪನಂತಹ ಉಪಮೆಗಳು ಯೋಗವಾಸಿಷ್ಠದಲ್ಲಿ ನೂರಾರು ಸಿಗುತ್ತವೆ. ಈ ಮಾತು ಸತ್ಯವೆಂಬುವುದಾಗಿ ಯೋಗವಾಸಿಷ್ಠ ನೋಡುತ್ತಿರುವಾಗ ನನಗೆ ಅನಿಸಿದೆ. ಸಾಂಪ್ರದಾಯಿಕರು ಯೋಗವಾಸಿಷ್ಠವನ್ನು ವಾಲ್ಮೀಕಿ ಮಹರ್ಷಿಗಳೇ ಬರೆದಿದ್ದಾರೆಂದು ನಿರ್ಣಯಿಸಿಕೊಂಡಿದ್ದಾರೆ. ಇಲ್ಲಿರುವ ಕಾವ್ಯಶೈಲಿ ಅವರ ನಿರ್ಣಯವನ್ನು ಬೆಂಬಲಿಸುತ್ತದೆ. ಯುದ್ಧದ ವರ್ಣನೆ ವಿಸ್ತಾರವಾಗಲು ಇದು ಕಾರಣ.
ಶ್ರೀ ವಸಿಷ್ಠರು ಹೇಳಿದರು: ‘ಶ್ರೀರಾಮ! ಈ ಯುದ್ಧವು ಎಷ್ಟು ತೀವ್ರವಾಗಿದೆಯೆಂದರೆ ವಿವಿಧ ಆಯುಧಗಳ ಪ್ರಯೋಗದಿಂದ ವೀರ ಕ್ಷತ್ರಿಯರ ತಲೆಗಳು ಆಕಾಶದಲ್ಲಿ ಹಾರಿಹೋಗಿ ಬೀಳುತ್ತಿವೆ. ಇದನ್ನು ನೋಡಿದರೆ ತೀವ್ರವಾದ ಗಾಳಿಯಿಂದ ಚದುರಿರುವ ಕಮಲಗಳಿರುವ ಸರೋವರದಂತೆ ಆಕಾಶವು ಕಂಡುಬರುತ್ತಿತ್ತು. ಆಯುಧಗಳಿಂದ ಪ್ರಕಟಗೊಳ್ಳುತ್ತಿರುವ ಕಾಂತಿಗಳೇ ಆ ಪದ್ಮಗಳ ಲತೆಯ ನಾಳಗಳು ಮತ್ತು ಆ ನಾಳಗಳೊಂದಿಗೆ ಕೂಡಿಕೊಂಡಿರುವ, ವೈರಿ ಶರೀರಗಳನ್ನು ಚುಚ್ಚುವ ಸಾಧನಗಳಾದ ಶೂಲ, ಕುಂತಾಯುಧ, ಖಡ್ಗ ಮುಂತಾದ ಆಯುಧಗಳೇ ಆ ನಾಳದ ಮುಳ್ಳುಗಳು. ಧ್ವಜಗಳ ಬಟ್ಟೆಗಳೇ ಆ ಕಮಲದ ಗಿಡಗಳ ಎಲೆಗಳು. ಪುಂಖಾನುಪುಂಖವಾಗಿ ಪ್ರವಹಿಸಲ್ಪಡುವ ಬಾಣಗಳೇ ಆ ಕಮಲಗಳಿಗೆ ಮುತ್ತುತ್ತಿರುವ ದುಂಬಿಗಳು. ಇಂತಹ ಕಮಲಗಳುಳ್ಳ ಸರೋವರದಂತೆ ಆ ಯುದ್ಧಾಂಗಣದ ಆಕಾಶವು ಭಾಸವಾಗುತ್ತಿತ್ತು. ಮರಣಹೊಂದಿದ ಆನೆಗಳ ಸಮೂಹದಲ್ಲಿ ಅನೇಕ ಆನೆಗಳ ಹಿಂದೆ ಯುದ್ಧದಲ್ಲಿ ಭಯಪಟ್ಟವರು ಅಡಗಿ ಕುಳಿತುಕೊಳ್ಳುತ್ತಿದ್ದರು. ಬಿದ್ದಿರುವ ಬೃಹದ್ಗಾತ್ರದ ಆನೆಯ ಶರೀರದ ಹಿಂದೆ ಅಡಗಿದರೆ ವೈರಿಗಳ ಬಾಣ ತಾಗುವುದಿಲ್ಲ. ಆದರೆ ಅವರು ಅಡಗುತ್ತಿರುವ ದೃಶ್ಯ ನೋಡಿದರೆ ಬೆಟ್ಟಗಳಿಗೆ ಇರುವೆಗಳು ಮುತ್ತಿಕೊಂಡಂತೆ ಅಥವಾ ಪುರುಷರ ವಕ್ಷಸ್ಥಲದಲ್ಲಿ ಸ್ತ್ರೀಯರು ಅಡಗುವಂತೆ ಕಾಣುತ್ತಿತ್ತು.
‘ಅಲ್ಲಿ ಬಂದಿರುವ ವಿದ್ಯಾಧರ ಸ್ತ್ರೀಯರು (ಒಂದು ಪ್ರಕಾರದ ದೇವತಾ ಸ್ತ್ರೀಯರು) ತಮ್ಮ ಮನೆಯಿಂದ ಹೊರಟು ಬರುವಾಗ ಶುಭ ಶಕುನವೋ ಎಂಬಂತೆ ಅವರ ಕೂದಲಿನ ಮುಂಗುರುಳುಗಳನ್ನು ಮಂದವಾದ ಗಾಳಿ ಚಲಿಸುವಂತೆ ಮಾಡಿರಬಹುದು. ಇದರಿಂದ ಈ ದಿನ ಅವರಿಗೆ ಅವರ ಮನೋರಥ ಸಿದ್ಧಿಯಾಗುವ ಸೂಚನೆಯಾಗಿರುವಂತೆ ಕಾಣುತ್ತದೆ. ಅಪೂರ್ವವಾದ ಉತ್ತಮ ಸೌಂದರ್ಯದಿಂದ ಕೂಡಿದ ಕಾಂತನೊಡನೆ ಅವರಿಗೆ ಸಂಗಮವಾಗಲಿ ಎಂಬುವುದೇ ಅವರ ಮನೋರಥ. (ಯುದ್ಧದಲ್ಲಿ ವೀರಮರಣವನ್ನೊಪ್ಪಿದ ಯೋಧರೇ ಇಲ್ಲಿ ಅವರು ಬಯಸಿದ ಕಾಂತರು)’. ‘ಯುದ್ಧದಲ್ಲಿ ಗೆಲುವು ಸಾಧಿಸುತ್ತಿರುವ ಸೇನೆಯ ಛತ್ರಗಳು ಎತ್ತರಕ್ಕೆ ಏರುತ್ತಿವೆ. ಆ ಛತ್ರಗಳು ಆಕಾಶದಷ್ಟು ಎತ್ತರಕ್ಕೆ ಏರಿರುವುದನ್ನು ನೋಡಿದರೆ ಆಕಾಶದಲ್ಲಿ ಹಗಲಿನಲ್ಲಿಯೇ ಚಂದ್ರನು ಮೂಡಿದಂತೆ ಕಾಣುತ್ತಿದೆ ಮತ್ತು ಯಶಸ್ಸೇ (ಗೆಲುವಿನ ಕೀರ್ತಿಯೇ) ಚಂದ್ರನ ರೂಪತಾಳಿ ಭೂಮಿಗೆ ಬೆಳುಗೊಡೆಯ ಮೂಲಕ ನೆರಳನ್ನುಂಟುಮಾಡುತ್ತಿರುವಂತೆ ಕಾಣುತ್ತಿದೆ.’
‘ಇದೇ ಹೊತ್ತಿಗೆ ಒಬ್ಬ ಭಟನು ಮರಣವೆಂಬ ಮೂರ್ಛಾವಸ್ಥೆಯನ್ನು ದಾಟುತ್ತಿರುವಂತೆಯೇ ನಿಮಿಷದಲ್ಲಿಯೇ ದೇವತಾ ಶರೀರವನ್ನು ಪಡೆದಿದ್ದಾನೆ. ಯುದ್ಧವೆಂಬ ಸ್ವಕರ್ಮವೇ ಅವರ ಈ ಸುಂದರ ಶರೀರದ ಶಿಲ್ಪಿ. ಸ್ವಪ್ನದಲ್ಲಿ ಹೊಸ ಊರನ್ನು ಕಂಡ ಹಾಗೆ ಕ್ಷಣಾರ್ಧದಲ್ಲಿಯೇ ಹೊಸ ಶರೀರವನ್ನು ಆತ ಪಡೆದ.’ ‘ಆಕಾಶದಲ್ಲಿ ಸೈನಿಕರು ಶೂಲ, ಶಕ್ತಿ, ಋಷ್ಟಿ, ಚಕ್ರ ಮುಂತಾದ ಆಯುಧಗಳನ್ನು ವಿಪುಲವಾಗಿ ಎಸೆಯುತ್ತಿದ್ದಾರೆ. ಮಳೆಗರೆದಂತೆ ಬೀಳುತ್ತಿರುವ ಆಯುಧಗಳನ್ನು ನೋಡಿದರೆ ಆ ಆಯುಧಗಳಿಗೆ ಇಷ್ಟೊಂದು ಆಕ್ರಮಣಗಳನ್ನು ಮಾಡಿದರೂ ಸಂತುಷ್ಟಿಯೇ ಇಲ್ಲದಿರುವಂತೆ ಕಾಣುತ್ತಿದೆ. ಆಕಾಶವೆಂಬ ಸಮುದ್ರದಲ್ಲಿ ಮೀನು, ಮೊಸಳೆ, ಮುಂತಾದ ಪ್ರಾಣಿಗಳ ಸಮೂಹಗಳೇ ಇರುವಂತೆ ಅವು ಕಾಣಿಸುತ್ತಿವೆ. ಬಾಣಗಳಿಂದ ಕತ್ತರಿಸಲ್ಪಟ್ಟ ಶ್ವೇತಚ್ಛತ್ರಗಳು ಆಕಾಶದಲ್ಲಿ ಹಂಸಗಳಂತೆ ಕಾಣುತ್ತಿವೆ. ಅಲ್ಲದೇ ಅನೇಕ ಚಂದ್ರರನ್ನು ಒಟ್ಟಿಗೆ ಆಕಾಶದಲ್ಲಿ ಸೇರಿಸಿದಂತೆ ಶ್ವೇತಚ್ಛತ್ರಗಳಿಂದ ಆಕಾಶವು ಆವೃತವಾಗಿತ್ತು. ಅದೇರೀತಿ ಗಗನದಲ್ಲಿ ಚಿಮ್ಮಲ್ಪಟ್ಟು ಹಾರಿಬರುತ್ತಿರುವ ಚಾಮರಗಳು ಶಬ್ದಮಾಡುತ್ತಾ ಬರುತ್ತಿರುವುದನ್ನು ನೋಡಿದರೆ ಆಕಾಶವೆಂಬ ಸರೋವರದಲ್ಲಿ ತರಂಗಗಳು ಬರುತ್ತಿರುವಂತೆ ಕಾಣುತ್ತಿತ್ತು. ಗಾಳಿ ಬೀಸುತ್ತಿರುವುದರಿಂದ ಅವುಗಳು ಇನ್ನಷ್ಟು ಚಂಚಲಗೊಂಡು ಬರುತ್ತಿರುವುದರಿಂದ ಚಂಚಲ ತರಂಗಗಳ ಶೋಭೆಯನ್ನೇ ಉಂಟುಮಾಡುತ್ತಿವೆ. (ಬಹುಶಃ ರಣಾಂಗಣದಲ್ಲಿ ರಥದ ಮೇಲಿರುವ ರಾಜರಿಗೆ ಚಾಮರವುಳ್ಳ ಪರಿಚಾರಕರು ಇದ್ದಿರಬಹುದು.