ನ್ಯೂಸ್

ಎಸ್ಸಿ- ಎಸ್ಟಿಗೆ ಮೀಸಲಾತಿ ಹೆಚ್ಚಳ: ಸುಗ್ರೀವಾಜ್ಞೆ ಮೂಲಕ ಜಾರಿಗೆ ಸಚಿವ ಸಂಪುಟ ಸಭೆ ಅಸ್ತು

arunakunigal

ಬೆಂಗಳೂರು: ಶಿಕ್ಷಣ ಮತ್ತು ಉದ್ಯೋಗದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮೀಸಲು ಹೆಚ್ಚಳಕ್ಕೆ ಸುಗ್ರೀವಾಜ್ಞೆ ಮೂಲಕ ಜಾರಿಗೆ‌ ತರಲು ಸಚಿವ ಸಂಪುಟ ಸಭೆ ಅಸ್ತು ಎಂದಿದೆ.

ನ್ಯಾಯಮೂರ್ತಿ ಎಚ್.ಎನ್ ನಾಗಮೋಹನ್ ದಾಸ್ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಅಂಗೀಕರಿಸಿದ್ದು, ಎಸ್​ಸಿ ಮೀಸಲು ಪ್ರಮಾಣ ಶೇ.15 ರಿಂದ 17ಕ್ಕೆ ಹಾಗೂ ಎಸ್​ಟಿ ಮೀಸಲು ಪ್ರಮಾಣ ಶೇ.3 ರಿಂದ 7ಕ್ಕೆ ಏರಿಕೆಯಾಗಲಿದೆ.

ಸಭೆ ಬಳಿಕ ಬುಧವಾರ ಮಾತನಾಡಿ ಸಚಿವ ಮಾಧುಸ್ವಾಮಿ, ಮೀಸಲಾತಿ ಹೆಚ್ಚಳದಿಂದ ಈಗ ಶೇ.6 ಹೆಚ್ಚಳ ಆಗುತ್ತೆ. ಅದನ್ನು ಯಾವ ರೀತಿ ಹೊಂದಣಿಕೆ ಮಾಡಬೇಕು ಅಂತ ಚರ್ಚೆಯಾಗಿದೆ. ಸೆಡ್ಯೂಲ್ 9ರ ಒಳಗೆ ತರುವ ಯೋಚನೆ ಇತ್ತು. ಬೇರೆ ಬೇರೆ ಬೇಡಿಕೆಗಳು ಇರುವ ಹಿನ್ನೆಲೆ ನಾಗಮೋಹನ್ ದಾಸ್ ವರದಿ ಮಾತ್ರ ಅನುಷ್ಠಾನ ಮಾಡುತ್ತಿದ್ದೇವೆ. ವ್ಯಾಪಕವಾಗಿ ಚರ್ಚೆ ನಡೆಸಿದ ಬಳಿಕ ಸೆಡ್ಯೂಲ್ 9ಕ್ಕೆ ಸೇರಿಸಲು ತೀರ್ಮಾನ ‌ಮಾಡಿದ್ದೇವೆ ಎಂದರು.

ಮೀಸಲಾತಿಗೆ ಅರ್ಹವಾಗಿರುವ ಜಾತಿಗಳ ಸಂಖ್ಯೆ ಏರಿಕೆಯಾಗಿದೆ. ಪರಿಶಿಷ್ಟ ಜಾತಿಯಲ್ಲಿ 103 ಜಾತಿಗಳಿವೆ. ಪರಿಶಿಷ್ಟ ಪಂಗಡದಲ್ಲಿ 56 ಜಾತಿಗಳಿವೆ. ಅಗತ್ಯಕ್ಕನುಗುಣವಾಗಿ ಮೀಸಲಾತಿ ನೀಡಲು ಸರ್ಕಾರ ಚಿಂತನೆ ಮಾಡಿದೆ. ಮೀಸಲಾತಿ ಹೆಚ್ಚಳದ ಫಲ EWS ( Economically weaker Section) ಮಾದರಿಯಲ್ಲಿ ಇರಲಿದೆ. ಆದರೆ ಅದಕ್ಕೆ ಸಂವಿಧಾನಾತ್ಮಕ ರಕ್ಷಣೆ ಇರಲಿದೆ. ನಾವು ಸುಗ್ರೀವಾಜ್ಞೆ ತರುವಾಗ ಸಂವಿಧಾನದ ಪ್ರಕಾರವೇ ಕ್ರಮ ಜರುಗಿಸುತ್ತೇವೆ. ಕೋರ್ಟ್​ನಲ್ಲೂ ನಮಗೆ ರಕ್ಷಣೆ ಸಿಗುವ ವಿಶ್ವಾಸವಿದೆ ಎಂದು ಮಾಧುಸ್ವಾಮಿ ತಿಳಿಸಿದರು.