ನ್ಯೂಸ್

ಹುಟ್ಟೂರಿಗೆ ಬಾರದ ನವೀನನ ಮೃತದೇಹ: ಭಾವಚಿತ್ರ ಇಟ್ಟು 3ನೇ ದಿನದ ಕಾರ್ಯ ನೆರವೇರಿಸಿದ ಕುಟುಂಬಸ್ಥರು

ಹಾವೇರಿ: ಯುದ್ಧಪೀಡಿತ ಯೂಕ್ರೇನ್​ನಲ್ಲಿ ರಷ್ಯಾ ಪಡೆ ನಡೆಸಿದ ಶೆಲ್​ ದಾಳಿಗೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ ಗ್ಯಾನಗೌಡರ ಬಲಿಯಾಗಿ ಇಂದಿಗೆ ಮೂರು ದಿನ. ವಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ.

ನವೀನ ಮೃತಪಟ್ಟು ಮೂರು ದಿನ ಆದರೂ ಮೃತದೇಹ ಪಾಲಕರ ಮಡಿಲು ಸೇರಿಲ್ಲ. ನೋವಿನಲ್ಲೇ ಕುಟುಂಬಸ್ಥರು ಮಗನ ಭಾವಚಿತ್ರ ಇಟ್ಟು ಗುರುವಾರ ಬೆಳಗ್ಗೆ ವೀರಶೈವ ಸಂಪ್ರದಾಯದಂತೆ 3ನೇ ದಿನದ ಕಾರ್ಯ ನಡೆಸಿದ್ದಾರೆ.

ಮೃತ ನವೀನನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವಾಗ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಬಿಕ್ಕಿಬಿಕ್ಕಿ ಅಳುತ್ತಿದ್ದ ತಾಯಿ ವಿಜಯಲಕ್ಷ್ಮಿ ಹಾಗೂ ಸಹೋದರ ಹರ್ಷ ಅವರನ್ನು ಸಮಾಧಾನ ಮಾಡಲು ಮುಂದಾದ ಸಂಬಂಧಿಕರಲ್ಲೂ ಕಣ್ಣೀರ ಕಟ್ಟೆಯೊಡೆದಿತ್ತು. ಈ ದೃಶ್ಯ ಎಂಥವರ ಮನವನ್ನೂ ಕಲಕುವಂತಿತ್ತು.