ಬೈಕ್ ಪೆಟ್ರೋಲ್ ಟ್ಯಾಂಕ್ ಮೇಲೆ ಯುವತಿ ಕುಳಿತು ಸಾಗುತ್ತಿರುವ ರೋಮಿಯೋ 
ನ್ಯೂಸ್

ಬೈಕ್ ಪೆಟ್ರೋಲ್ ಟ್ಯಾಂಕ್ ಮೇಲೆ ರೊಮ್ಯಾಂಟಿಕ್ ರೈಡ್: ಇದು ರವಿಚಂದ್ರನ್ ಸಿನಿಮಾ ಶೈಲಿಯ ಡೇಂಜರಸ್ ಸವಾರಿ | Couple bike stunt

Couple dangerous bike stunt: ಕ್ರೇಜಿಸ್ಟಾರ್ ರವಿಚಂದ್ರನ್ ಅವರ ‘ಪ್ರೇಮಲೋಕ’ ಸಿನಿಮಾದ ಹಿಟ್ ಹಾಡಿನಲ್ಲಿ ಬೈಕ್ ಮೇಲೆ ಹೀರೋಯಿನ್ ಕೂರಿಸಿಕೊಂಡು ಹೋಗುವ ಸೀನ್ ನೆನಪಿದೆಯಾ? ಥೇಟ್ ಅದೇ ಶೈಲಿಯಲ್ಲಿ, ‘ಏ ಗಂಗೂ, ಈ ಬೈಕೂ ಕಲಿಸಿಕೊಡೋ ನಂಗೂ’ ಎನ್ನುವಂತೆ ಯುವತಿಯೊಬ್ಬಳು ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮೇಲೆ ಯುವಕನನ್ನು ತಬ್ಬಿಕೊಂಡು ಕುಳಿತು ಹುಚ್ಚಾಟ ಮೆರೆದಿದ್ದಾರೆ.

ರಸ್ತೆಯಲ್ಲಿ ಸಾಗುತ್ತಿದ್ದ ಇತರ ವಾಹನ ಸವಾರರು ಈ ಅಪಾಯಕಾರಿ ಹಾಗೂ ನಿಯಮಬಾಹಿರ ಸವಾರಿಯನ್ನು ತಮ್ಮ ಮೊಬೈಲ್‌ನಲ್ಲಿ ವೀಡಿಯೋ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯ ಈ ವೀಡಿಯೋ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ಎಲ್ಲಿ ನಡೆದಿದ್ದು ಈ ಘಟನೆ?

ಈ ಘಟನೆಯು ಉತ್ತರ ಪ್ರದೇಶದ ಕೌಶಾಂಬಿ ಜಿಲ್ಲೆಯ ಸಂದೀಪನ್ ಘಾಟ್ ಪೊಲೀಸ್ ಠಾಣೆ ವ್ಯಾಪ್ತಿಯ ಬಸೇಡಿ ಸಮೀಪದ 'ರಾಮ ವನ ಗಮನ ಮಾರ್ಗ'ದಲ್ಲಿ ನಡೆದಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸುದ್ದಿ ಮಾಧ್ಯಮಗಳಲ್ಲೂ ವರದಿಯಾಗಿದೆ.

ಹೈವೇಯಲ್ಲಿ ನಿಯಮ ಗಾಳಿಗೆ ತೂರಿ ಸಾರ್ವಜನಿಕರ ಜೀವಕ್ಕೂ ಅಪಾಯ ತಂದೊಡ್ಡುವಂತೆ ಸವಾರಿ ಮಾಡಿದ್ದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ವೈರಲ್ ವೀಡಿಯೋದಲ್ಲಿ ಬೈಕ್‌ನ ನೋಂದಣಿ ಸಂಖ್ಯೆ ಸ್ಪಷ್ಟವಾಗಿ ಕಾಣಿಸುತ್ತಿದೆ.

ಇದನ್ನೂ ಓದಿ: ಕುಡಿದವರು ಹೇಳೋದೆಲ್ಲಾ ಸತ್ಯಾನಾ? ನಶೆಯಲ್ಲಿ ಆಡುವ ಮಾತುಗಳ ಹಿಂದಿನ ಅಸಲಿ ರಹಸ್ಯ ಇಲ್ಲಿದೆ! | Alcohol truth serum

ರಸ್ತೆ ಸುರಕ್ಷತೆಗೆ ಧಕ್ಕೆ

ಸಂಚಾರಿ ನಿಯಮಗಳ ಉಲ್ಲಂಘನೆ ಮತ್ತು ರಸ್ತೆ ಸುರಕ್ಷತೆಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ, ಬೈಕ್ ನಂಬರ್ ಆಧರಿಸಿ ಆ ಯುವಕನನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸ್ಥಳೀಯ ಪೊಲೀಸರು ಮತ್ತು ಸಂಚಾರಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.