ನ್ಯೂಸ್

ಹಸುವಿನ ಸಗಣಿ ಎಂದು ಮೂಗು ಮುರಿಯದಿರಿ; ಜಾನುವಾರು ಸಗಣಿ ಮಾರಿ ಶ್ರೀಮಂತನಾದ ರೈತ..ಕೋಟಿಗಟ್ಟಲೆ ಬೆಲೆ ಬಾಳುವ ಬಂಗಲೆ ಕಟ್ಟಿಸಿದ

ಮಹರಾಷ್ಟ್ರ: ಭಾರತ ಕೃಷಿ ಪ್ರಧಾನ ದೇಶ. ನಮ್ಮ ದೇಶದಲ್ಲಿ ಸರಿಸುಮಾರು 80 ಪ್ರತಿಶತದಷ್ಟು ಜನರು ತಮ್ಮ ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿದ್ದಾರೆ. ಕೋಟ್ಯಂತರ ರೈತರು ಪಶುಸಂಗೋಪನೆಯ ಮೂಲಕ ತಮ್ಮ ಮನೆಯ ಖರ್ಚನ್ನು ನಡೆಸುತ್ತಿದ್ದಾರೆ.

ಹಾಲು ಮತ್ತು ಅದರ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಅನೇಕರು ವಾರ್ಷಿಕವಾಗಿ ಕೋಟ್ಯಂತರ ರೂಪಾಯಿ ಗಳಿಸುತ್ತಾರೆ. ಆದರೆ ಹಸುವಿನ ಸಗಣಿ ಮಾರುವ ಮೂಲಕ ರೈತ ಕೋಟ್ಯಾಧಿಪತಿಯಾಗಿದ್ದಾನೆಂದರೆ ಅಚ್ಚರಿಯಾಗುತ್ತದೆ. ಬನ್ನಿ ಅಂತಹದ್ದೆ ಒಂದು ಸುದ್ದಿ ಹೇಳುತ್ತೇವೆ...

ರೈತನ ಹೆಸರು ಪ್ರಕಾಶ್ ನೇಮಾಡೆ. ಪ್ರಕಾಶ್ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಸಂಗೋಳ ತಾಲೂಕಿನ ಇಮ್ದೇವಾಡಿ ಗ್ರಾಮದವರಾಗಿದ್ದು, ಹಸುವಿನ ಸಗಣಿ ಮಾರಾಟ ಮಾಡಿ ಕೋಟ್ಯಂತರ ರೂಪಾಯಿ ಮೌಲ್ಯದ ಬಂಗಲೆಯನ್ನೂ ನಿರ್ಮಿಸಿದ್ದಾರೆ. ಈ ಬಂಗಲೆಗೆ 'ಗೋಧನ್ ನಿವಾಸ' ಎಂದು ಹೆಸರಿಡಲಾಗಿದೆ.

ಪ್ರಕಾಶ್ ನೆಮಾಡೆ ಅವರು ಪಿತ್ರಾರ್ಜಿತವಾಗಿ ಬಂದಿರುವ ಜಮೀನು ಕೇವಲ 4 ಎಕರೆ ಮಾತ್ರ. ಆದರೆ ನೀರಿನ ಕೊರತೆಯಿಂದ ಸರಿಯಾಗಿ ಕೃಷಿ ಮಾಡಲು ಸಾಧ್ಯವಾಗಿಲ್ಲ. ಅಂತಹ ಪರಿಸ್ಥಿತಿಗಳಲ್ಲಿ, ಅವರು ಜೀವನೋಪಾಯಕ್ಕಾಗಿ ಹಸುಗಳನ್ನು ಸಾಕಲು ಪ್ರಾರಂಭಿಸಿದರು.ಬಳಿಕ ಹಾಲು ಮಾರಾಟ ಮಾಡಿ ಉತ್ತಮ ಆದಾಯ ಗಳಿಸಲು ಆರಂಭಿಸಿದರು. ವಿಶೇಷವೆಂದರೆ ಹಾಲಿನ ವ್ಯಾಪಾರ ಆರಂಭಿಸಿದಾಗ ಅವರ ಬಳಿ ಇದ್ದದ್ದು ಒಂದೇ ಹಸು. ಆರಂಭದಲ್ಲಿ ಮನೆ ಮನೆಗೆ ಹಾಲು ಮಾರುತ್ತಿದ್ದರು. ಆದರೆ ಕಠಿಣ ಪರಿಶ್ರಮದಿಂದ ಅವರು ಹಸು ಸಾಕಣೆಯಲ್ಲಿ ದೊಡ್ಡ ಸಾಧನೆ ಮಾಡಿದರು. ಇಂದು ಅವರ ಬಳಿ 150 ಹಸುಗಳಿವೆ. ಈಗ ಅವರು ಸ್ಮಾರ್ಟ್ ಉದ್ಯಮಿಗಳಾಗಿದ್ದಾರೆ. ಹಸುಗಳಿಂದ ಹಾಲು, ಸಗಣಿ ಜಮೆ ಮಾಡಿ ವ್ಯಾಪಾರ ಮುಂದುವರಿಸಿದ್ದಾರೆ.

ಒಂದು ಕೋಟಿ ರೂಪಾಯಿಗಿಂತ ಹೆಚ್ಚಿನ ಆದಾಯ: ಪ್ರಕಾಶ್ ಹಸುವಿನ ಸಗಣಿ ಮಾರಾಟ ಮಾಡಿ ಕೋಟ್ಯಂತರ ರೂಪಾಯಿ ಸಂಪಾದಿಸುತ್ತಿದ್ದಾರೆ. ಪ್ರಕಾಶ್ ಸಾವಯವ ಕೃಷಿಕರಿಂದ ಹಸುವಿನ ಸಗಣಿ ಖರೀದಿಸುತ್ತಾರೆ. ಇದಲ್ಲದೇ ಗೋಮಯ ಅನಿಲ ಸ್ಥಾವರವನ್ನೂ ನಿರ್ಮಿಸಿದ್ದಾರೆ. ಹಸುವಿನ ಸಗಣಿಯೊಂದಿಗೆ ಗ್ಯಾಸ್ ಕೂಡ ಮಾರಾಟವಾಗುತ್ತದೆ.

ಇದುವರೆಗೆ ದನದ ಸಗಣಿ ವ್ಯಾಪಾರದ ಮೂಲಕ ಒಂದು ಕೋಟಿ ರೂಪಾಯಿಗೂ ಹೆಚ್ಚು ಆದಾಯ ಗಳಿಸಿದ್ದೇನೆ. ವೃದ್ಧಾಪ್ಯದವರೆಗೂ ಗೋವಿನ ಸೇವೆ ಮಾಡುವುದು ಉತ್ತಮವಾಗಿದೆ ಎಂದು ಪ್ರಕಾಶ್ ನೆಮಾಡೆ ಹೇಳಿದ್ದಾರೆ.