ಬೆಂಗಳೂರು: ನಟ ಪುನೀತ್ ರಾಜ್ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಕಾಲಿವುಡ್ ಸೂಪರ್ ಸ್ಟಾರ್ ವಿಶಾಲ್ ಚೆನ್ನೈನ ಸುತ್ತಮುತ್ತಲ ವೃದ್ಧಾಶ್ರಮಗಳಲ್ಲಿ ಅನ್ನದಾನ ಮಾಡಿದ್ದಾರೆ.
ಮಾ.17 ಅಪ್ಪು ಜನ್ಮದಿನ. ಇದೇ ದಿನ ಅವರ ಕೊನೇ ಚಿತ್ರ ಜೇಮ್ಸ್ ಕೂಡ ವಿಶ್ವಾದ್ಯಂತ ತೆರೆಕಂಡಿದೆ. ಅಪ್ಪು ಇಲ್ಲದ ಮೊದಲ ವರ್ಷದ ಬರ್ತಡೇಯನ್ನು ಕೋಟ್ಯಂತರ ಅಭಿಮಾನಿಗಳು ಅನ್ನದಾನ, ರಕ್ತದಾನ, ನೇತ್ರದಾನ ಸೇರಿದಂತೆ ವಿವಿಧ ಸಾಮಾಜಿಕ ಕಾಯ್ರಕಮ ಹಮ್ಮಿಕೊಳ್ಳುವ ಮೂಲಕ ವಿಭಿನ್ನವಾಗಿ ಆಚರಿಸಿದರು. ಇದೇ ರೀತಿ ನಟ ವಿಶಾಲ್ ಕೂಡ ಅಪ್ಪು ನೆನಪಲ್ಲಿ 200ಕ್ಕೂ ಹೆಚ್ಚು ವೃದ್ಧರಿಗೆ ಅನ್ನಸಂತರ್ಪಣೆ ಮಾಡಿದ್ದಾರೆ.
ಅಪ್ಪು ಮೇಲೆ ವಿಶಾಲ್ಗೆ ಇರುವ ಅಭಿಮಾನ ಕಂಡು ಕನ್ನಡಿಗರೂ ಖುಷಿಯಾಗಿದ್ದಾರೆ.
ಅಪ್ಪು ನಿಧನದ ಸುದ್ದಿ ಕೇಳಿ ತೀವ್ರ ಆಘಾತಗೊಂಡಿದ್ದ ನಟ ವಿಶಾಲ್, ಅಪ್ಪು ನಡೆಸುತ್ತಿದ್ದ ಶಕ್ತಿಧಾಮದ ಜವಬ್ದಾರಿ ಹೊತ್ತುಕೊಳ್ಳಲು ಮುಂದೆ ಬಂದಿದ್ದರು. ಸದ್ಯಕ್ಕೆ ಸಹಾಯ ಬೇಡ, ಮುಂದೆ ನೋಡೋಣ ಎಂದು ನಟ ಶಿವರಾಜ್ಕುಮಾರ್ ಹೇಳಿದ್ದರು. ಶಕ್ತಿಧಾಮದ ಸಂಪೂರ್ಣ ಜವಬ್ದಾರಿಯನ್ನು ಶಿವಣ್ಣ ಹಾಗೂ ಗೀತಾ ಶಿವರಾಜ್ಕುಮಾರ್ ವಹಿಸಿಕೊಂಡಿದ್ದಾರೆ.