ನ್ಯೂಸ್

ಸಂಪಾದಕೀಯ| ಸೂಕ್ತ ಖರೀದಿ ವ್ಯವಸ್ಥೆ ಅಗತ್ಯ

Webdesk - Manjunatha B

ಗಂಭೀರ ಕಾಯಿಲೆಗಳಿಗೆ ನೀಡಲಾಗುವ ಜೀವರಕ್ಷಕ ಔಷಧಿಗಳ ಕೊರತೆಯು ಸರ್ಕಾರಿ ಆಸ್ಪತ್ರೆಗಳಲ್ಲಿ ಇರುವುದನ್ನು ಸ್ವತಃ ಸರ್ಕಾರವೇ ಒಪ್ಪಿಕೊಂಡಿರುವುದು ಪರಿಸ್ಥಿತಿ ಚಿಂತಾಜನಕವಾಗಿರುವುದರ ದ್ಯೋತಕವಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ದೊರೆಯುವ ಚಿಕಿತ್ಸೆಯ ಗುಣಮಟ್ಟದ ಬಗೆಗೆ ಸಾರ್ವಜನಿಕರಿಂದ ಅನುಮಾನಗಳು ವ್ಯಾಪಕ ಪ್ರಮಾಣದಲ್ಲಿವೆ. ಹೀಗಾಗಿ ಸ್ಥಿತಿವಂತರು ಖಾಸಗಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆದುಕೊಂಡರೆ, ಬಡ-ಕೆಳ ಮಧ್ಯಮ ವರ್ಗದವರು ಅನಿವಾರ್ಯವಾಗಿ ಸರ್ಕಾರಿ ಆಸ್ಪತ್ರೆಗಳನ್ನು ಅವಲಂಬಿಸುತ್ತಾರೆ. ಆದರೆ, ಔಷಧಿಯೇ ಇಲ್ಲವೆಂದಾದರೆ, ಸರ್ಕಾರ ಆಸ್ಪತ್ರೆಗಳಲ್ಲಿ ಹೇಗೆ ಚಿಕಿತ್ಸೆ ನೀಡಲು ಸಾಧ್ಯ ಎಂಬ ಗಂಭೀರ ಪ್ರಶ್ನೆ ಉದ್ಭವಿಸುತ್ತದೆ.

ಆರೋಗ್ಯ ಇಲಾಖೆ ಅಧೀನದ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದ (ಕೆಎಸ್​ಎಂಎಸ್​ಸಿಎಲ್) ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಗಂಭೀರ ಕಾಯಿಲೆ ಸಂಬಂಧಿ ಔಷಧಗಳ ಕೊರತೆ ಉಂಟಾಗಿದೆ. ಬಾಕಿ ಬಿಲ್ ವಿಲೇವಾರಿ ವಿಳಂಬದಿಂದಾಗಿ ಟೆಂಡರ್​ಗಳಲ್ಲಿ ಭಾಗಿಯಾಗಲು ಕಂಪನಿಗಳು ಹಿಂದೇಟು ಹಾಕುತ್ತಿವೆ. 233 ಔಷಧಗಳ ಟೆಂಡರ್​ಗಳಿಗೆ ಯಾವುದೇ ಕಂಪನಿಗಳು ಭಾಗಿಯಾಗಿಲ್ಲ ಎಂಬುದನ್ನು ಕೆಎಸ್​ಎಂಎಸ್​ಸಿಎಲ್ ಆಡಳಿತವೇ ಒಪ್ಪಿಕೊಂಡಿದೆ.

ವಿವಿಧ ಔಷಧ ಹಾಗೂ ವೈದ್ಯಕೀಯ ಸಲಕರಣೆಗಳನ್ನು ಖರೀದಿಸಿ ಸರ್ಕಾರಿ ಆಸ್ಪತ್ರೆಗಳಿಗೆ ಪೂರೈಸುವ ಹೊಣೆ ಕೆಎಸ್​ಎಂಎಸ್​ಸಿಎಲ್ ಮೇಲಿದೆ. ಈ ನಿಗಮವು ಮೇ ತಿಂಗಳಿನಲ್ಲಿಯೇ ಟೆಂಡರ್ ಪ್ರಕ್ರಿಯೆ ಮುಗಿಸಿ ಎಲ್ಲ ಔಷಧ ಹಾಗೂ ವೈದ್ಯಕೀಯ ಉಪಕರಣ ಖರೀದಿಸಿ ದಾಸ್ತಾನು ಮಾಡಬೇಕಿದ್ದರೂ ಪ್ರಸ್ತುತ ಟೆಂಡರ್ ಪ್ರಕ್ರಿಯೆ ಕೂಡ ಮುಗಿದಿಲ್ಲ. ಔಷಧ ಪೂರೈಕೆ ಮಾಡಿರುವ ಕಂಪನಿಗಳಿಗೆ 30 ದಿನದೊಳಗೆ ಔಷಧ ಬಿಲ್​ಗಳಿಗೆ ಹಣ ಪಾವತಿಸಬೇಕೆಂಬ ನಿಯಮವೇ ಪಾಲನೆಯಾಗದಿರುವುದು ನಿಗಮದಲ್ಲಿನ ಅಧಿಕಾರಿ- ಸಿಬ್ಬಂದಿಯ ದಿವ್ಯ ನಿರ್ಲಕ್ಷ್ಯವನ್ನು ಸೂಚಿಸುತ್ತದೆ.

ವಾರ್ಷಿಕ ಟೆಂಡರ್ ಬದಲು ದ್ವೈವಾರ್ಷಿಕ ಟೆಂಡರ್ ಕರೆಯುವ ಮೂಲಕ ಔಷಧ ಕೊರತೆ ನೀಗಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಆದರೆ, ಇಂತಹ ಬದಲಾವಣೆಯು ಪ್ರತಿ ವರ್ಷದ ಬದಲು ಎರಡು ವರ್ಷಕ್ಕೊಮ್ಮೆ ಔಷಧ ಕೊರತೆಗೆ ಕಾರಣವಾಗಬಹುದಷ್ಟೇ. ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ನಿಗಮದ ಕಾರ್ಯವೈಖರಿಯನ್ನು ಆಮೂಲಾಗ್ರವಾಗಿ ಬದಲಾಯಿಸುವ ಅಗತ್ಯತೆ ಕಂಡುಬರುತ್ತದೆ. ಮೊಟ್ಟಮೊದಲನೆಯದ್ದಾಗಿ, ಔಷಧಗಳ ಖರೀದಿಗೆ ಹಣದ ಕೊರತೆ ಇರದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರದ ಮೇಲಿದೆ. ಏಕೆಂದರೆ, ಸರ್ಕಾರಿ ಆಸ್ಪತ್ರೆ ಅವಲಂಬಿಸಿರುವ ಬಡ ರೋಗಿಗಳು ತಮ್ಮರೋಗವನ್ನು ಮುಂದೂಡಲಾಗದು. ಅಲ್ಲದೆ, ಔಷಧಿ ಖರೀದಿಗೆ ಪರ್ಯಾಯ ಹಾಗೂ ಸೂಕ್ತ ವಿಧಾನಗಳತ್ತ ಸರ್ಕಾರ ಗಮನಹರಿಸಬೇಕು. ಮಧ್ಯವರ್ತಿಗಳ ಮೂಲಕ ಖರೀದಿಸುವ ಬದಲು ನೇರವಾಗಿ ಔಷಧ ಉತ್ಪಾದಕ ಕಂಪನಿಗಳಿಂದಲೇ ಖರೀದಿಸಬಹುದು. ಇದರಿಂದ ಗುಣಮಟ್ಟದ ಹಾಗೂ ಅಗತ್ಯವಿರುವ ಔಷಧಿ ಲಭ್ಯವಾಗಬಹುದು. ಅನೇಕ ಖಾಸಗಿ ಆಸ್ಪತ್ರೆಗಳು ಇದೇ ಮಾದರಿ ಅನುಸರಿಸುವುದು ಗಮನಾರ್ಹ. ಔಷಧಗಳ ಕೊರತೆಯಾಗದಂತೆ ಸೂಕ್ತ ಖರೀದಿ ವ್ಯವಸ್ಥೆ ರೂಪಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಕೇಂದ್ರ ಸರ್ಕಾರ ಪ್ರೋತ್ಸಾಹಿಸುತ್ತಿರುವ ಜನೌಷಧಿಗಳು ಅಗ್ಗದ ದರ ಹೊಂದಿದ್ದು, ಇವುಗಳನ್ನು ಖರೀದಿಸುವತ್ತ ಕೂಡ ಸರ್ಕಾರವು ಪಕ್ಷಾತೀತವಾಗಿ ಚಿಂತನೆ ನಡೆಸಬೇಕಿದೆ.