ಬೆಂಗಳೂರು: ಸ್ವಾವಲಂಬನೆ ಬದುಕು ರೂಪಿಸಿಕೊಳ್ಳುವ ಸಲುವಾಗಿ ನೀವು ಹವಣಿಸುತ್ತೀದ್ದೀರಾ? ಮನೆ ಬಳಿಯೇ ಕೋಳಿ ಸಾಕಾಣಿಕೆ ಮಾಡಿ ಆರ್ಥಿಕ ಲಾಭ ಮಾಡಬೇಕು ಎಂದು ಯೋಚಿಸಿದ್ದೀರಾ? ಅಂತಹವರಿಗೆ ಇಲ್ಲಿದೆ ಉಪಯುಕ್ತ ಮಾಹಿತಿ.
ಕೋಳಿ ಸಾಕಾಣಿಕೆ ಉದ್ಯಮ ಮಾಡಬೇಕೆಂದರೆ ಲಕ್ಷಾಂತರ ರೂಪಾಯಿ ಬೇಕು. ಇದರ ನಿರ್ವಹಣೆ ಕೂಡ ಅಷ್ಟು ಸುಲಭದ ಮಾತಲ್ಲ. ಆದರೆ ಅತ್ಯಂತ ಕಡಿಮೆ ಖರ್ಚಿನಲ್ಲಿ ಸಣ್ಣ ಪ್ರಮಾಣದಲ್ಲಿ ಕೋಳಿ ಸಾಕಾಣಿಕೆ ಉದ್ಯಮ ಆರಂಭಿಸಲು ಅನುಕೂಲವಾಗುವಂತಹ ಹೊಸ ವಿಧಾನವನ್ನು ಜಿಕೆವಿಕೆ ಆವರಣದ ಕೃಷಿ ಮೇಳದಲ್ಲಿ ಪರಿಚಯಿಸಲಾಗಿದೆ.
ಸಣ್ಣ ಪ್ರಮಾಣದಲ್ಲಿ ಗೃಹಿಣಿಯರು ಕೂಡ ಮನೆಗಳಲ್ಲಿ ಕೋಳಿ ಸಾಕಾಣಿಕೆ ಮಾಡಲು ಇದು ನೆರವಾಗಲಿದೆ. ಅಝ್ರಾ ಫೌಲ್ಟ್ರಿ ಎಕ್ವಿಪ್ಮೆಂಟ್ ಸಂಸ್ಥೆಯು 50 ಕೋಳಿಗಳನ್ನು ಸಾಕಬಹುದಾದ ಪುಟಾಣಿ ಸ್ಟ್ಯಾಂಡ್ ಅನ್ನು ಸಿದ್ಧಪಡಿಸಿದೆ. ಮನೆಯ ಕೊಟ್ಟಿಗೆ, ಹಿತ್ತಲು ಅಥವಾ ಮನೆಯ ಪಕ್ಕದ ನೆರಳಿರುವ ಜಾಗದಲ್ಲಿ ಕೋಳಿ ಸಾಕಾಣಿಕೆ ಮಾಡಬಹುದು. 50 ಕೋಳಿಗಳು ಕುಳಿತುಕೊಳ್ಳಲು ಆಗುವಷ್ಟು ಪುಟಾಣಿ ಸ್ಟ್ಯಾಂಡ್ ಇದಾಗಿದೆ. ಈ ಸ್ಟ್ಯಾಂಡ್ನಲ್ಲೇ ಆಹಾರ ಮತ್ತು ನೀರು ಸೇವಿಸಲು ಅನುಕೂಲವಾಗುವಂತೆ ಪೈಪ್ ಮಾದರಿಯ ವ್ಯವಸ್ಥೆ ಮತ್ತು ಕೋಳಿ ಇಡುವ ಮೊಟ್ಟೆಗಳನ್ನು ಸಂಗ್ರಹಿಸಿಡಲು ಅವಕಾಶವಿದೆ. ಕೋಳಿ ತ್ಯಾಜ್ಯ ಕೂಡ ಹೊರಗೆ ಹೋಗಲು ವ್ಯವಸ್ಥೆ ಮಾಡಲಾಗಿದೆ.