ನ್ಯೂಸ್

ಜಾಗತಿಕ ಮಟ್ಟದಲ್ಲಿ ಬೆಂಗಳೂರಿನ ಮಾನ ಹರಾಜು: ಬಿಬಿಎಂಪಿ-ಸರ್ಕಾರಕ್ಕೆ ಜನರ ಹಿಡಿಶಾಪ

ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಕರ್ನಾಟಕದ ರಾಜಧಾನಿ ಬೆಂಗಳೂರಿನ ಮಾನ ಹರಾಜಾಗಿದೆ. 'ಅಂದು ಕಸದಿಂದ ಮಾನ ಹೋಯ್ತು, ಇಂದು ರಸ್ತೆಗುಂಡಿಯಿಂದ ಮಾನ ಹೋಯ್ತು' ಎಂದು ನಾಗರಿಕರು ಅಭಿಯಾನ ಶುರು ಮಾಡಿದ್ದಾರೆ. ಬೆಂಗಳೂರಿನ ರಸ್ತೆಗಳು ಹದಗೆಟ್ಟಿರುವ ವಿಡಿಯೋ ಸಾಕಷ್ಟು ವೈರಲ್​ ಆಗುತ್ತಿದ್ದು, 'ರಸ್ತೆಯೋ- ಗುಂಡಿಯೋ?', 'ಐಟಿ ಸಿಟಿಯಲ್ಲ, ಇದು ರಸ್ತೆಗುಂಡಿಗಳ ಸಿಟಿ', 'ಕೋಟಿ ಕೋಟಿ ತೆರಿಗೆ ಹಣ ಪಾವತಿಸಿದ ಜನರಿಗೆ ಬಿಬಿಎಂಪಿ ಮತ್ತು ಸರ್ಕಾರ ಮಾತ್ರ ಗುಂಡಿ ಭಾಗ್ಯ ಕೊಟ್ಟಿವೆ', 'ಸ್ಮಾರ್ಟ್​ ಸಿಟಿ, ಸೂಪರ್​ ಸ್ಮಾರ್ಟ್​ ಗುಂಡಿ' ಎಂದು ವ್ಯಾಪಕ ಟೀಕೆಗಳು ಬರುತ್ತಿವೆ.

ರಸ್ತೆಗಳ ಗುಂಡಿ ಮುಚ್ಚುವಂತೆ ಎಸ್.​ಎಂ. ಕೃಷ್ಣ ಅವರು ಪತ್ರ ಬರೆದಿದ್ದರು. ಇದೀಗ ಉದ್ಯಮಿಗಳು ಕೂಡ ಬೆಂಗಳೂರಿನ ರಸ್ತೆ ಅವ್ಯವಸ್ಥೆ ಕುರಿತು ಸರಣಿ ಟ್ವೀಟ್ ಮಾಡಿದ್ದಾರೆ. 'ಬೆಂಗಳೂರಿನ ರಸ್ತೆಗಳು ಹದಗೆಟ್ಟು ಹೊಂಡ-ಗುಂಡಿಗಳಿಂದಾಗಿ ಸಾರ್ವಜನಿಕರು ಜೀವ ಕೈಯಲ್ಲಿಡಿದು ಸಂಚರಿಸುವ ಪರಿಸ್ಥಿತಿ ಉದ್ಭವಿಸಿದೆ' ಎಂದು ಇತ್ತೀಚೆಗೆ ಉದ್ಯಮಿ ಮೋಹನದಾಸ್​ ಪೈ ಅವರು ಹದಗೆಟ್ಟ ರಸ್ತೆಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಮತ್ತೋರ್ವ ಉದ್ಯಮಿ ಕಿರಣ್​ ಮಜುಂದಾರ್​ ಷಾ ಅವರು 'ಆನೇಕಲ್​ ತಾಲೂಕಿನ ಹುಸ್ಕೂರು-ಸರ್ಜಾಪುರ ರಸ್ತೆ ಸಂಚಾರಕ್ಕೆ ಯೋಗ್ಯವಿಲ್ಲದಷ್ಟು ಹದಗೆಟ್ಟಿವೆ. ಸ್ಥಳೀಯ ಶಾಸಕ, ಸಂಸದರು ಮತ್ತು ಸ್ಥಳೀಯ ರಾಜಕಾರಣಿಗಳಿಗೆ ನಾಚಿಕೆಯಾಗಬೇಕು. ಹುಸ್ಕೂರು ಗ್ರಾಪಂ ಆಡಳಿತ ಮಂಡಳಿ ಉತ್ತಮ ರಸ್ತೆ ಸೌಕರ್ಯ ಕಲ್ಪಿಸಿಲ್ಲ. ಆನೇಕಲ್​ ಶಾಸಕ ಮತ್ತು ಕ್ಷೇತ್ರದ ಸಂಸದರಿಗೆ ಜವಾಬ್ದಾರಿ ಇಲ್ಲ. ಹುಸ್ಕೂರು-ಸರ್ಜಾಪುರ ರಸ್ತೆ ಪರಿಸ್ಥಿತಿ ಶೋಚನೀಯವಾಗಿದೆ' ಎಂದು ಟ್ವಿಟರ್​​ ಮೂಲಕ ಅಸಮಾಧಾನ ಹೊರಹಾಕಿದ್ದಾರೆ. 'ಉತ್ತಮ ರಸ್ತೆಯ ಸೌಕರ್ಯ ನೀಡಲು ಸಾಧ್ಯವಾಗದಿದ್ದರೆ, ಸರ್ಕಾರ ಏಕೆ ಬಸ್​ ಡಿಪೋ ಮತ್ತು ವಸತಿ ಗೃಹಗಳನ್ನು ನಿರ್ಮಿಸಬೇಕಿತ್ತು?' ಎಂದು ಕಿರಣ್​ ಮಜುಂದಾರ್​ ಷಾ ಅವರು ಖಾರವಾಗಿ ಪ್ರಶ್ನೆ ಮಾಡಿದ್ದಾರೆ.

ಬೆಂಗಳೂರಿನ ರಸ್ತೆಗಳ ಅವ್ಯವಸ್ಥೆ ಬಗ್ಗೆ ಸ್ಥಳೀಯರು ಮಾತ್ರವಲ್ಲ, ವಾಹನ ಸವಾರರು ನಿತ್ಯ ಬೇಸರ ಹೊರಹಾಕುತ್ತಲೇ ಇದ್ದಾರೆ. ಮೃತ್ಯುಕೂಪದಂತೆ ರಸ್ತೆಯಲ್ಲಿ ಬಾಯ್ತೆರೆದ ಗುಂಡಿಗಳನ್ನು ನೋಡಿ ಜೀವಭಯದಲ್ಲೇ ನಿತ್ಯ ಪ್ರಯಾಣಿಸುತ್ತಿದ್ದಾರೆ. ಮಳೆಗಾಲ ಶುರುವಾಗಿದೆ. ಅಪಾಯ ಕಟ್ಟಿಟ್ಟ ಬುಟ್ಟಿ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಪ್ರಶ್ನಿಸಿದರೆ ಶೀಘ್ರವೇ ಸರಿ ಆಗುತ್ತೆ, ಮಳೆ ಬಂದಿದೆ ಅಲ್ವಾ ಅದಕ್ಕೆ ಹೀಗಾಗಿದೆ ಅಂತಾರೆ. ಆದರೆ ಸಮಸ್ಯೆ ಮಾತ್ರ ಬಗೆಹರಿಸಲ್ಲ ಎಂದು ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ.