ನ್ಯೂಸ್

ಕುರಿ ಕದ್ದ ಕಳ್ಳರ ಬದಲು, ಕುರಿ ಮಾಲೀಕರ ಹುಡುಕಾಟಕ್ಕೆ ಹೊರಟ ಪೊಲೀಸರು!

ಚಾಮರಾಜನಗರ: ಕುರಿ ಕದ್ದ ಕಳ್ಳರ ಹಿಂದೆ ಬೀಳುವ ಪೊಲೀಸರು ಕೆಲವೊಮ್ಮೆ ಕುರಿ ಮಾಲೀಕರ ಹುಡುಕಾಟವನ್ನೂ ನಡೆಸಬೇಕಾಗುತ್ತದೆ. ತಾಲೂಕಿನ ಸಂತೇಮರಹಳ್ಳಿ ಠಾಣೆ ಪೊಲೀಸರು ಈಗ ಇದೇ ಪ್ರಯತ್ನದಲ್ಲಿ ತೊಡಗಿದ್ದಾರೆ.

ಶುಕ್ರವಾರ ರಾತ್ರಿ ಕಾವುದವಾಡಿ-ಸಂತೇಮರಹಳ್ಳಿ ರಸ್ತೆಯಲ್ಲಿ ಇಬ್ಬರು ಯುವಕರು ಬೈಕ್​ನಲ್ಲಿ 3 ಕುರಿಗಳನ್ನು ಹೊತ್ತೊಯ್ಯುತ್ತಿದ್ದರು. ಗಸ್ತು ನಡೆಸಲು ಅದೇ ದಾರಿಯಲ್ಲಿ ಬಂದ ಪೊಲೀಸರಿಗೆ ಅನುಮಾನ ಮೂಡಿ ಅವರನ್ನು ಹಿಂಬಾಲಿಸಲು ಶುರು ಮಾಡಿದ್ದಾರೆ‌. ಬೆನ್ನುಬಿದ್ದ ಪೊಲೀಸರನ್ನು ನೋಡಿ ಭಯಗೊಂಡ ಕಳ್ಳರು ಮಹದೇಶ್ವರ ದೇವಸ್ಥಾನದ ಬಳಿ ಕುರಿಗಳನ್ನು ಎಸೆದು ವೇಗವಾಗಿ ಪರಾರಿಯಾಗಿದ್ದಾರೆ.

ಕಳ್ಳರು ಕಣ್ತಪ್ಪಿಸಿಕೊಂಡ ಬಳಿಕ ಅವರು ಬಿಟ್ಟು ಹೋಗಿದ್ದ 3 ಕುರಿಗಳನ್ನು ಪೊಲೀಸರು ಠಾಣೆಗೆ ತಂದು ಆವರಣದಲ್ಲಿ ಕಟ್ಟಿ ಮೇವು ಹಾಕಿದ್ದಾರೆ. ಕಳ್ಳರು ಯಾವ ಊರಿನಲ್ಲಿ, ಯಾರ ಕುರಿ ಕದ್ದಿದ್ದಾರೆ ಎನ್ನುವುದು ಗೊತ್ತಾಗಿಲ್ಲ. ಯಾರೊಬ್ಬರೂ ಕುರಿಗಳು ಕಳವು ಆಗಿವೆ ಎಂದು ದೂರು ನೀಡಲು ಠಾಣೆಗೂ ಬಂದಿಲ್ಲ. ಹೀಗಾಗಿ ಪೊಲೀಸರು ಕುರಿಗಳ ಮಾಲೀಕರ ಹುಡುಕಾಟ ಆರಂಭಿಸಿದ್ದಾರೆ.