kcr modi 
ನ್ಯೂಸ್

ಹೈದರಾಬಾದ್​ನಲ್ಲಿ ಮೋದಿ, ಬೆಂಗ್ಳೂರಲ್ಲಿ ಕೆಸಿಆರ್! ಪ್ರಧಾನಿಗೆ ಸ್ವಾಗತ ಕೋರಲು ಮನಸು ಮಾಡಲಿಲ್ಲ ಏಕೆ ತೆಲಂಗಾಣ ಸಿಎಂ?

ಬೆಂಗಳೂರು: ವಿದೇಶ ಪ್ರವಾಸದಿಂದ ಮರಳಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರುವಾರ ಮಧ್ಯಾಹ್ನ ಹೈದರಾಬಾದ್​ಗೆ ಬಂದಿಳಿದರೆ, ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಬೆಂಗಳೂರಿಗೆ ದೌಡಾಯಿಸಿದರು.

ಮೋದಿ ಅವರನ್ನು ಸ್ವಾಗತಿಸುವ ಬದಲು ಕರ್ನಾಟಕಕ್ಕೆ ಚಂದ್ರಶೇಖರ ರಾವ್ ಬಂದದ್ದು ತೆಲಂಗಾಣ ರಾಜಕೀಯ ರಂಗದಲ್ಲಿ ಬಿಸಿ ಚರ್ಚೆಗೆ ಗ್ರಾಸವಾಗಿದೆ. ಮೋದಿ ಅವರ ಭೇಟಿ ತಪ್ಪಿಸಿಕೊಳ್ಳುತ್ತಿರುವುದು ಇದು ಮೂರನೇ ಬಾರಿಯಾಗಿದ್ದು, ತೆಲಂಗಾಣ ಪ್ರತಿಪಕ್ಷ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಇದೊಂದು ಕೆಳಮಟ್ಟದ ರಾಜಕಾರಣವೆಂದು ಹರಿಹಾಯ್ದಿದೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಪದ್ಮನಾಭ ನಗರ ನಿವಾಸಕ್ಕೆ ಆಗಮಿಸಿದ ಕೆಸಿಆರ್, ದೇವೇಗೌಡ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಜತೆಗೆ ಮಧ್ಯಾಹ್ನದ ಭೋಜನದ ಬಳಿಕ‌ ದೇಶದ‌ ಪ್ರಸ್ತುತ‌ ರಾಜಕೀಯ ವಿದ್ಯಮಾನ, ತೃತೀಯ ರಂಗಕ್ಕೆ ಚಾಲನೆ ನೀಡುವ ಅಗತ್ಯತೆ ಕುರಿತು ಚರ್ಚಿಸಿದರು ಎಂದು ಮೂಲಗಳು ತಿಳಿಸಿವೆ.

ಉದ್ದೇಶಪೂರ್ವಕ ವಿಳಂಬ?: ಮೋದಿಯವರು ಹೈದರಾಬಾದ್​ನ ಇಂಡಿಯನ್ ಬ್ಯುಸಿನೆಸ್‌ ಸ್ಕೂಲ್ ದ್ವಿಶತಮಾನೋತ್ಸವ, ಪದವಿ‌ ದಿನ ಹಾಗೂ ವಿದ್ವಾಂಸರಿಗೆ ಪದಕ ಪ್ರದಾನ‌ದ ಬಳಿಕ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮ ಮುಗಿದು, ಮೋದಿ ದೆಹಲಿಗೆ ಮರು ಪ್ರಯಾಣ ಬೆಳೆಸುವ ತನಕ ಹೈದರಾಬಾದ್​ಗೆ ಕಾಲಿಡಬಾರದು ಎಂದು ಪ್ಲ್ಯಾನ್ ಮಾಡಿ ಕೆ.ಚಂದ್ರಶೇಖರ ರಾವ್, ಬೆಂಗಳೂರಿಗೆ ಉದ್ದೇಶಪೂರ್ವಕವಾಗಿ ತಡವಾಗಿ ಬಂದರು ಎಂಬ ಸಂಶಯ ವ್ಯಕ್ತವಾಗಿದೆ.

ಪೂರ್ವ ನಿಗದಿತ ವೇಳಾಪಟ್ಟಿ ಪ್ರಕಾರ ಹೈದರಾಬಾದ್​ನಿಂದ ವಿಶೇಷ ವಿಮಾನದಲ್ಲಿ ಹೊರಟು ಅಪರಾಹ್ನ 12ಕ್ಕೆ‌ ಬೆಂಗಳೂರಿನ ಎಚ್​ಎಎಲ್ ವಿಮಾನ ನಿಲ್ದಾಣದಲ್ಲಿ ಇಳಿದು, ಮಧ್ಯಾಹ್ನ ‌12.30ಕ್ಕೆ ದೇವೇಗೌಡರ ಮನೆಗೆ ಭೇಟಿ, ಮಾತುಕತೆ ಬಳಿಕ ಮಧ್ಯಾಹ್ನ ಮೂರಕ್ಕೆ ಹೈದರಾಬಾದ್​ಗೆ ಮರು ಪ್ರಯಾಣ ಬೆಳೆಸಬೇಕಿತ್ತು. ಆದರೆ ಒಂದು ತಾಸು ತಡವಾಗಿ ಮಧ್ಯಾಹ್ನ 1.30ಕ್ಕೆ ದೇವೇಗೌಡರ ನಿವಾಸಕ್ಕೆ ತೆಲಂಗಾಣ ಸಿಎಂ ಧಾವಿಸಿದರು. ಊಟದ ನಂತರ ಮಧ್ಯಾಹ್ನ 3.15 ಕಳೆದರೂ ಮಾತುಕತೆ ಮುಂದುವರಿದೇ‌ ಇತ್ತು. ಬಹುಶಃ ಮೋದಿಯವರು ಕಾರ್ಯಕ್ರಮ ಮುಗಿಸಿ ಹೈದರಾಬಾದ್​ನಿಂದ ಮರಳುತ್ತಿದ್ದಾರೆ ಎಂಬ ಸಂದೇಶಕ್ಕಾಗಿ ಕಾದು ಕು‌ಳಿತು, ದೇವೇಗೌಡರ ಜತೆಗಿನ ಮಾತುಕತೆಯನ್ನು ಚಂದ್ರಶೇಖರ ರಾವ್ ಅವಂಬಿಸಿದರು ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.