ನ್ಯೂಸ್

20 ಅಡಿ ಆಳದಲ್ಲಿದ್ದ ಬೃಹತ್ ಪೈಪ್​ಲೈನ್​ಗೆ ಕನ್ನ ಹಾಕಿ ಪೆಟ್ರೋಲ್​ ಕಳವು! ಇವನ ಖತರ್ನಾಕ್​ ಐಡಿಯಾ ಕೇಳಿದ್ರೆ ಶಾಕ್​ ಆಗ್ತೀರಿ

ಮಂಗಳೂರು: ಹಿಂದೂಸ್ತಾನ್ ಪೆಟ್ರೋಲಿಯಂಗೆ ಸೇರಿದ 20 ಅಡಿ ಆಳದಲ್ಲಿದ್ದ ಬೃಹತ್ ಪೈಪ್​ಲೈನ್​ಗೆ ಕನ್ನ ಹಾಕಿದ ಖತರ್ನಾಕ್​ ಕಳ್ಳನೊಬ್ಬ ಪೆಟ್ರೋಲ್​ ಕದ್ದಿದ್ದಾನೆ...

ಹೌದು, ಇಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಸೋರ್ನಾಡು ಅರ್ಬಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಮಂಗಳೂರಿನಿಂದ ಬೆಂಗಳೂರಿಗೆ ಪೆಟ್ರೋಲ್ ಪೂರೈಕೆ ಮಾಡುವ ಹಿಂದೂಸ್ತಾನ್ ಪೆಟ್ರೋಲಿಯಂಗೆ ಸೇರಿದ ಬೃಹತ್ ಪೈಪ್​ಲೈನ್​ ಐವನ್ ಎಂಬಾತನಿಗೆ ಸೇರಿದ ಖಾಸಗಿ ಜಮೀನಿನ ರಸ್ತೆಯಲ್ಲಿ ಹಾದು ಹೋಗಿದೆ.

ಇದನ್ನೇ ಬಂಡವಾಳ ಮಾಡಿಕೊಂಡ ಐವನ್​, ತನ್ನ ಭೂಮಿ ಬಳಿ ಗುಂಡಿ ತೋಡಿ ಪೈಪ್​ಲೈನ್​ ಕೊರೆದು ಅದಕ್ಕೆ ಇನ್ನೊಂದು ಪೈಪ್​ ಅಳವಡಿಸಿದ್ದಾನೆ. ​ಅರ್ಧ ಕಿ.ಮೀ. ದೂರದಲ್ಲಿ ಗೇಟ್ ವಾಲ್ ಸಿಕ್ಕಿಸಿ ಟ್ಯಾಪ್ ಮೂಲಕ ವಾಹನಕ್ಕೆ ಪೆಟ್ರೋಲ್ ತುಂಬಿಸಿ ಮಾರಾಟ ಮಾಡುತ್ತಿದ್ದ.

ಪೆಟ್ರೋಲ್ ಪೂರೈಕೆಯಲ್ಲಿ ವ್ಯತ್ಯಯ ಕಂಡು ಬಂದು ಕಂಪನಿಯವರು ಹುಡುಕಾಟ ನಡೆಸುತ್ತಾ ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಿ ಪೊಲೀಸರ ಸಮಕ್ಷಮ ಜೆಸಿಬಿ ಮೂಲಕ ಭೂಮಿ ಅಗೆದಾಗ ಕೃತ್ಯ ಬಯಲಾಗಿದೆ. ಆರೋಪಿ ಐವನ್ ಪರಾರಿಯಾಗಿದ್ದು, ಬಂಟ್ವಾಳ ಪೊಲೀಸರಿಂದ ಹುಡುಕಾಟ ಮುಂದುವರಿಸಿದ್ದಾರೆ.