ನ್ಯೂಸ್

38 ದಿನ ವೆಂಟಿಲೇಟರ್​ ಹಾಕಿಸಿಕೊಂಡಿದ್ದರೂ ಕೋವಿಡ್​ ಗೆದ್ದ ಹೀರೋ!

ಕೋಲ್ಕತಾ: ಕರೊನಾ ಸೋಂಕು ತಗುಲಿದವರಿಗೆ ತೀವ್ರ ಜ್ವರ, ಕೆಮ್ಮು ಮತ್ತು ನೆಗಡಿಯ ಜತೆಗೆ ಉಸಿರಾಟದಲ್ಲೂ ಭಾರಿ ತೊಂದರೆ ಉಂಟಾಗುತ್ತದೆ. ಆ ಸಂದರ್ಭದಲ್ಲಿ ವೆಂಟಿಲೇಟರ್​ ಅಳವಡಿಸಿ, ಅವರ ಆರೋಗ್ಯವನ್ನು ಸ್ಥಿರಗೊಳಿಸಲು ವೈದ್ಯರು ಯತ್ನಿಸುತ್ತಾರೆ. ಹೀಗೆ ವೆಂಟಿಲೇಟರ್​ ಹಾಕಿಸಿಕೊಂಡು 38 ದಿನ ಹೋರಾಡಿದ ವ್ಯಕ್ತಿಯೊಬ್ಬರು ಕೊನೆಗೂ ಕೋವಿಡ್​ ಅನ್ನು ಗೆದ್ದು, ಮನೆಗೆ ಮರಳಿದ್ದಾರೆ. ಇವರ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದನ್ನು ಕಂಡು ಸಂತಸ ಪಟ್ಟ ನೆರೆಹೊರೆಯವರು ಇವರಿಗೆ ಭರ್ಜರಿ ಸ್ವಾಗತ ನೀಡಿದ್ದಾರೆ.

ಕೋಲ್ಕತಾದ ನಿತಾಯ್​ದಾಸ್​ ಮುಖರ್ಜಿ (52) ಕೋವಿಡ್​ ಗೆದ್ದು ಮನೆಗೆ ಮರಳಿದವರು. ಕೋವಿಡ್​ ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರ ಪ್ರಕಾರ ಈ ಚಮತ್ಕಾರಿ ಚೇತರಿಕೆ ವೈದ್ಯಕೀಯ ಲೋಕದ ಅಚ್ಚರಿಯಾಗಿದೆ.

ವೈದ್ಯರ ಪ್ರಕಾರ ದೀರ್ಘ ಕಾಲದವರೆಗೆ ವೆಂಟಿಲೇಟರ್​ ಹಾಕಿಸಿಕೊಂಡವರು ಬದುಕುಳಿಯುವ ಸಾಧ್ಯತೆ ತುಂಬಾ ಕಡಿಮೆಯಾಗಿರುತ್ತದೆ. ಇಂಥದ್ದರಲ್ಲಿ ನಿತಾಯ್​ದಾಸ್​ ಮುಖರ್ಜಿ 38 ದಿನ ವೆಂಟಿಲೇಟರ್​ ಹಾಕಿಸಿಕೊಂಡಿದ್ದರೂ ಕೋವಿಡ್​ ಅನ್ನು ಗೆದ್ದು ಮನೆಗೆ ಮರಳಿದ ಬಗ್ಗೆ ವೈದ್ಯರು ಕೂಡ ಹರ್ಷ ವ್ಯಕ್ತಪಡಿಸಿದ್ದಾರೆ.

ತಮಗೆ ಹೊಸ ಜೀವನ ನೀಡಿದ ವೈದ್ಯರ ತಂಡ ಮತ್ತು ಆಸ್ಪತ್ರೆಯ ಇತರೆ ಸಿಬ್ಬಂದಿಗೆ ನಿತಾಯ್​ದಾಸ್​ ಮುಖರ್ಜಿ ಧನ್ಯವಾದ ಅರ್ಪಿಸಿದ್ದಾರೆ. ನನ್ನ ಪಾಲಿಗೆ ಇದು ಮರುಹುಟ್ಟು ಆಗಿದೆ. ವೈದ್ಯರು ಮುತುವರ್ಜಿಯಿಂದ ಚಿಕಿತ್ಸೆ ನೀಡದೇ ಹೋಗಿದ್ದರೆ ನಾನು ಜೀವಂತವಾಗುಳಿಯಲು ಸಾಧ್ಯವೇ ಇರಲಿಲ್ಲ. ವಾಸ್ತವವಾಗಿ ನನ್ನನ್ನು ಉಳಿಸಲು ಅಹಿರ್ನಿಶಿ ಹೋರಾಡಿದ ಅವರು ನಿಜವಾದ ಹೀರೋಗಳು ಎಂದು ಹೇಳಿದ್ದಾರೆ.

2017ರಲ್ಲಿ ನ್ಯುಮೋನಿಯಾಕ್ಕೆ ತುತ್ತಾಗಿ ಬದುಕುಳಿದಿದ್ದ ನಿತಾಯ್​ದಾಸ್​ ಮುಖರ್ಜಿ ಅವರಲ್ಲಿ ಮಾರ್ಚ್​ ಮಧ್ಯ ಭಾಗದಲ್ಲಿ ಭಾರಿ ಶೀತ ಮತ್ತು ನೆಗಡಿ ಕಾಣಿಸಿಕೊಂಡಿತು. ಬಹುಶಃ ಅವರು ಮತ್ತೊಮ್ಮೆ ನ್ಯುಮೋನಿಯಾಕ್ಕೆ ತುತ್ತಾಗಿರಬಹುದು ಎಂದೇ ಕುಟುಂಬದವರು ಭಾವಿಸಿದ್ದರು.

ನಾವು ಯಾವುದೇ ವಿದೇಶ ಪ್ರವಾಸ ಮಾಡಿರಲಿಲ್ಲ. ಆದರೂ ಅವರಲ್ಲಿ ಕಾಣಿಸಿಕೊಂಡ ಕೆಮ್ಮ ಮತ್ತು ಶೀತವನ್ನು ಗಮನಿಸಿದಾಗ ಅದು ಕೋವಿಡ್​ನ ಲಕ್ಷಣಗಳನ್ನು ಹೋಲುತ್ತಿತ್ತು. ಹಾಗಾಗಿ ಮಾ.29ರಂದು ನಾವು ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದೆವು. ಅವರು ಸ್ಥಿತಿ ಗಂಭೀರವಾಗುತ್ತಲೇ ಅಂದೇ ರಾತ್ರಿ ಅವರಿಗೆ ವೆಂಟಿಲೇಟರ್​ ಹಾಕಲಾಯಿತು. ಮರುದಿನ ಅವರಿಗೆ ಕರೊನಾ ಸೋಂಕು ತಗುಲಿರುವುದು ಖಚಿತಪಟ್ಟಿತು. ಅಂದಿನಿಂದ ಅವರ ಜೀವನ್ಮರಣದ ಹೋರಾಟವೂ ಆರಂಭವಾಗಿತ್ತು ಎಂದು ನಿತಾಯ್​ದಾಸ್​ ಅವರ ಪತ್ನಿ ಅಪರಾಜಿತಾ ಮುಖರ್ಜಿ ಹೇಳಿದ್ದಾರೆ.