ನ್ಯೂಸ್

ಸಂಪಾದಕೀಯ | ವ್ಯಾಪಾರ ಸಮರಕ್ಕೂ ವಿರಾಮ

ಅಮೆರಿಕ ಮತ್ತು ಚೀನಾ ಮಧ್ಯೆ ನಡೆಯುತ್ತಿದ್ದ ತೆರಿಗೆ ಸಮರಕ್ಕೆ ತಾತ್ಕಾಲಿಕವಾಗಿಯಾದರೂ ವಿರಾಮ ದೊರೆತಿದೆ. ಜಿನೀವಾದಲ್ಲಿ ನಡೆದ ಅಧಿಕಾರಿಗಳ ಉನ್ನತ ಮಟ್ಟದ ಸಭೆಯಲ್ಲಿ ‘ತೆರಿಗೆ ಸಮರ’ಕ್ಕೆ 90 ದಿನಗಳ ತಡೆ ನೀಡಲು ಎರಡೂ ದೇಶಗಳು ಸಮ್ಮತಿಸಿವೆ. ಫೆ. 1ರಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮೆಕ್ಸಿಕೋ ಮತ್ತು ಕೆನಡಾ ಮೇಲೆ ಶೇ. 25ರಷ್ಟು ತೆರಿಗೆ ಜೊತೆಗೆ ಚೀನಾ ಮೇಲೆಯೂ ಶೇ. 10ರಷ್ಟು ಕರ ವಿಧಿಸುವುದರೊಂದಿಗೆ ಈ ಸಮರ ಪ್ರಾರಂಭವಾಗಿತ್ತು. ಅಮೆರಿಕಕ್ಕೆ ಈ ದೇಶಗಳಿಂದ ಅಪಾಯಕಾರಿ ಫೆಂಟಾನಿಲ್ ಡ್ರಗ್ಸ್ ಸಾಗಣೆ ಹೆಚ್ಚಾಗಿದೆ ಎಂಬ ಕಾರಣಕ್ಕೆ ಟ್ರಂಪ್ ಈ ಕ್ರಮಕ್ಕೆ ಮುಂದಾಗಿದ್ದರು.

2021ರಲ್ಲಿ ಅಮೆರಿಕದಲ್ಲಿ ಅಧಿಕ ಡ್ರಗ್ಸ್ ಸೇವನೆಯಿಂದ 1 ಲಕ್ಷಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, ಅದರಲ್ಲಿ ಶೇ. 67ರಷ್ಟು ಸಾವುಗಳಿಗೆ ಫೆಂಟಾನಿಲ್ ಕಾರಣ ಎಂಬುದು ದೃಢಪಟ್ಟಿತ್ತು. ಇದಲ್ಲದೆ, ಟ್ರಂಪ್ ಕ್ರಮಕ್ಕೆ ಇತರ ಕಾರಣಗಳೂ ಇದ್ದವು. ಜಗತ್ತಿನ ಇತರ ರಾಷ್ಟ್ರಗಳೊಂದಿಗೆ ಹೋಲಿಸಿದರೆ ಅಮೆರಿಕ ಹೊಂದಿದ್ದ ದೊಡ್ಡ ಪ್ರಮಾಣದ ವ್ಯಾಪಾರ ಕೊರತೆ, ಅಮೆರಿಕದ ಉತ್ಪಾದನಾ ವಲಯ ಅನುಭವಿಸುತ್ತಿದ್ದ ನಷ್ಟ ಇವು ಕೂಡ ಟ್ರಂಪ್ ಕ್ರಮಕ್ಕೆ ಕಾರಣವಾಗಿದ್ದವು. ಏಪ್ರಿಲ್ 2ರಂದು ಟ್ರಂಪ್ ಎಲ್ಲ ದೇಶಗಳ ಮೇಲೆ ಪರಸ್ಪರ ತೆರಿಗೆ ಹೇರಿ, ಚೀನಾ ಮೇಲಿನ ತೆರಿಗೆ ಪ್ರಮಾಣವನ್ನು ಹೆಚ್ಚಿಸಿದಾಗ ಸಮಸ್ಯೆ ಬಿಗಡಾಯಿಸಿತು. ಇತರ ದೇಶಗಳು ಸುಮ್ಮನಿದ್ದರೆ, ಚೀನಾ ಪ್ರತೀಕಾರಕ್ಕೆ ಮುಂದಾಯಿತು.

ಪರಿಣಾಮವಾಗಿ ಏ. 10ರ ವೇಳೆಗೆ ಚೀನಾದ ಮೇಲೆ ಅಮೆರಿಕ ಶೇ. 145ರಷ್ಟು ಮತ್ತು ಅಮೆರಿಕದ ಮೇಲೆ ಚೀನಾ ಶೇ. 125ರಷ್ಟು ತೆರಿಗೆ ವಿಧಿಸಿಕೊಂಡಿದ್ದವು. ಇದು ಈ ಎರಡು ರಾಷ್ಟ್ರಗಳ ವ್ಯಾಪಾರ-ವಹಿವಾಟಿನ ಮೇಲೆ ಮಾತ್ರವಲ್ಲ, ಇಡೀ ಜಗತ್ತಿನ ಪೂರೈಕೆ ಸರಪಳಿಯ ಮೇಲೆ ದುಷ್ಪರಿಣಾಮ ಉಂಟು ಮಾಡಿತು. ಅಮೆರಿಕ ಮತ್ತು ಚೀನಾ ಎರಡೂ ಆರ್ಥಿಕ ಹಿಂಜರಿತದ ಭೀತಿಗೆ ಒಳಗಾದವಲ್ಲದೆ ಉದ್ಯೋಗ ನಷ್ಟವನ್ನೂ ಅನುಭವಿಸಿದವು. ವ್ಯಾಪಾರ ವಿಶ್ವಾಸಾರ್ಹತೆಯಂತೂ ತೀರಾ ಕೆಳಮಟ್ಟಕ್ಕೆ ಕುಸಿಯಿತು. ತಜ್ಞರು ಮತ್ತು ಹೂಡಿಕೆದಾರರು ಹೇಳುವ ಪ್ರಕಾರ, ಅಮೆರಿಕವಂತೂ ಆರ್ಥಿಕ ಹಿಂಜರಿತದ ಹೊಸ್ತಿಲಿಗೆ ಬಂದು ನಿಂತಿತ್ತು.

ರಫ್ತಿನ ಮೇಲೆ ತೀವ್ರ ಅವಲಂಬಿತವಾಗಿರುವ ಚೀನಾಕ್ಕೂ ಈ ತೆರಿಗೆ ಯುದ್ಧ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಸೋಮವಾರ ಘೊಷಣೆಯಾಗಿರುವ ‘ವ್ಯಾಪಾರ ಕದನ ವಿರಾಮ’ದಿಂದಾಗಿ ಎರಡೂ ದೇಶಗಳು ಅಪಾಯದ ದವಡೆಯಿಂದ ಪಾರಾಗಿ ಬಂದಂತಾಗಿದೆ. ಎರಡೂ ಕಡೆಯ ಸಮಾಲೋಚಕರೂ ಈ ಕರಸಮರದಿಂದ ಉಭಯ ದೇಶಗಳಿಗೆ ಮತ್ತು ಒಟ್ಟಾರೆ ಜಾಗತಿಕ ಸಮುದಾಯಕ್ಕೆ ಆಗುವ ನಷ್ಟವನ್ನು ಅಂದಾಜಿಸಿದ್ದಾರೆ. ಅತ್ಯಂತ ವಿವೇಚನೆಯಿಂದ ಸೂಕ್ತ ತೀರ್ಮಾನ ಕೈಗೊಂಡಿದ್ದಾರೆ. ಅವರ ನಿರ್ಧಾರದಿಂದ ಇಡೀ ಜಗತ್ತಿನ ವ್ಯಾಪಾರ ಸಮುದಾಯ ನಿಟ್ಟುಸಿರು ಬಿಡುವಂತಾಗಿದೆ.