ವಿಜಯಪುರ: ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಕಾಮುಕನಿಗೆ 10 ವರ್ಷ ಕಠಿಣ ಶಿಕ್ಷೆ ವಿಧಿಸಿ ಜಿಲ್ಲಾ ಹಾಗೂ ಸತ್ರ (ವಿಶೇಷ) ಪೋಕ್ಸೊ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ತಿಡಗುಂದಿ ಗ್ರಾಮದ ಯಲ್ಲಪ್ಪ ಶಿವಪ್ಪ ಬಳ್ಳೂರ ಶಿಕ್ಷೆಗೆ ಗುರಿಯಾದವ. 2015ರಲ್ಲಿ ಇಂಡಿ ತಾಲೂಕಿನ ಅಹಿರಸಂಗ ಗ್ರಾಮದಲ್ಲಿ ಕಬ್ಬು ಕಟಾವು ಕೆಲಸಕ್ಕೆ ಹೋಗಿ ಅಲ್ಲೇ ಟೆಂಟ್ ಹಾಕಿಕೊಂಡು ವಾಸವಾಗಿದ್ದ ಕುಟುಂಬವೊಂದರ 11 ವರ್ಷದ ಬಾಲಕಿಯನ್ನು ಯಲ್ಲಪ್ಪ ಪುಸಲಾಯಿಸಿ ಕರೆದುಕೊಂಡು ಹೋಗಿದ್ದ. ಸೋಲ್ಲಾಪುರ, ಕರಾಡ ಹಾಗೂ ತಿಡಗುಂದಿ ಊರುಗಳಿಗೆ ಕರೆದೊಯ್ದು, ಆ ಸ್ಥಳಗಳಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಬಗ್ಗೆ ಇಂಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶೆ ಎನ್. ಸವಿತಾ ಕುಮಾರಿ ಅವರು ಅಪರಾಧಿಗೆ 10 ವರ್ಷ ಕಠಿಣ ಶಿಕ್ಷೆ ಹಾಗೂ 15 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕ ವಿ.ಜಿ. ಹಗರಗುಂಡ ವಾದ ಮಂಡಿಸಿದ್ದರು.