ಬಿಹಾರ: ಮುಖ್ಯಮಂತ್ರಿ ನಿತೀಶ್ಕುಮಾರ್ ರಾಜೀನಾಮೆ ನೀಡಿದ್ದು, ಎನ್ಡಿಎ-ಜೆಡಿಯು ಮೈತ್ರಿಕೂಟ ಪತನಗೊಂಡಿದೆ. ಶೀಘ್ರವೇ ಆರ್ಜೆಡಿ(ರಾಷ್ಟ್ರೀಯ ಜನತಾ ದಳ) ಮತ್ತು ಜೆಡಿಯು ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರಲಿದೆ.
ಬಿಜೆಪಿ ನಾಯಕರೊಂದಿಗೆ ಹಲವು ವಿಚಾರಕ್ಕೆ ಮುನಿಸಿಕೊಂಡಿದ್ದ ನಿತೀಶ್ಕುಮಾರ್ ಕೊನೆಗೂ ಬಿಜೆಪಿ ಜತೆಗಿನ ಮೈತ್ರಿಯಿಂದ ಹೊರ ಬಂದಿದ್ದಾರೆ. ಮಂಗಳವಾರ ಪಟನಾದಲ್ಲಿ ಜೆಡಿಯು ಶಾಸಕರು, ಪರಿಷತ್ ಸದಸ್ಯರು ಮತ್ತು ಸಂಸದರೊಂದಿಗೆ ಸಭೆ ನಡೆಸಿದ ನಿತೀಶ್, ಅಂತಿಮವಾಗಿ ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು. ಅತ್ತ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಕೂಡ ಪಕ್ಷದ ಶಾಸಕರು ಮತ್ತು ಸಂಸದರ ಜತೆ ಸಭೆ ನಡೆಸಿದ್ದಾರೆ. ಶೀಘ್ರವೇ ಆರ್ಜೆಡಿ ಮತ್ತು ಜೆಡಿಯೂ ಮೈತ್ರಿ ಸರ್ಕಾರ ರಚನೆಯಾಗಲಿದೆ. ಆರ್ಜೆಪಿ ಪಕ್ಷದ ಸದಸ್ಯರು ಬೆಂಬಲ ಸೂಚಿಸಿ ಪತ್ರವನ್ನು ರಾಜ್ಯಪಾಲರಿಗೆ ರವಾನಿಸಿದ್ದಾರೆ.
ನಿತೀಶ್ ಆಕ್ರೋಶಕ್ಕೆ ಕೆಲ ಕಾರಣಗಳು
– ವಿಧಾನಸಭೆ ಸ್ಪೀಕರ್ ವಿಜಯ್ ಕುಮಾರ್ರನ್ನು (ಬಿಜೆಪಿ ಶಾಸಕ) ಹುದ್ದೆಯಿಂದ ಕೆಳಗಿಳಿಸಬೇಕು ಎಂಬ ಬೇಡಿಕೆಗೆ ಒಪ್ಪಿಲ್ಲ.
– ರಾಜ್ಯ ಮಂತ್ರಿಮಂಡಲಕ್ಕೆ ಬಿಜೆಪಿ ಶಾಸಕರನ್ನು ಆಯ್ಕೆ ಮಾಡುವ ವೇಳೆ ತಮ್ಮ ಅಭಿಪ್ರಾಯಕ್ಕೆ ಆದ್ಯತೆ ಸಿಗುತ್ತಿಲ್ಲ.
– ಅಮಿತ್ ಷಾ ಪ್ರಾಬಲ್ಯ ತಪ್ಪಿಸುವುದು ನಿತೀಶ್ ಉದ್ದೇಶ. ಆದರೆ ಇದು ಸಾಧ್ಯವಾಗುತ್ತಿಲ್ಲ.
– ಬಿಹಾರದಲ್ಲಿ ಜಾತಿ ಆಧರಿತ ಜನಗಣತಿ ಮಾಡಬೇಕು ಎಂಬ ಬೇಡಿಕೆಗೆ ಕೇಂದ್ರದಿಂದ ಸೂಕ್ತ ಸ್ಪಂದನೆ ಸಿಗಲಿಲ್ಲ.
– ಏಕಕಾಲದಲ್ಲಿ ಲೋಕಸಭೆ, ವಿಧಾನಸಭೆ ಚುನಾವಣೆ ನಡೆಯಬೇಕು ಎಂಬ ಕೇಂದ್ರದ ಪ್ರತಿಪಾದನೆ ನಿತೀಶ್ಗೆ ಇಷ್ಟವಾಗಲಿಲ್ಲ.
ರಾಜೀನಾಮೆ ಬಳಿಕ ಮಾತನಾಡಿದ ನಿತೀಶ್ ಕುಮಾರ್, ನಾವು ಎನ್ಡಿಎ ಮೈತ್ರಿಕೂಟ ತೊರೆದಿದ್ದೇವೆ. ನಮ್ಮ ಶಾಸಕರು, ಸಂಸದರ ಜತೆ ಚರ್ಚಿಸಿಯೇ ಈ ತೀರ್ಮಾನ ತೆಗೆದುಕೊಂಡಿದ್ದೇವೆ. ಎನ್ಡಿಎ ಜತೆ ಮೈತ್ರಿ ಯಾರಿಗೂ ಬೇಕಿಲ್ಲ ಎಂದು ತಿಳಿಸಿದ್ದಾರೆ.